ಜಿಲ್ಲೆ

125 ಕಲಾಕೃತಿ ಪ್ರದರ್ಶನಕ್ಕೆ ನಿರ್ಧಾರ

ಕಲಬುರಗಿ: ಸಾಹಿತ್ಯ ಸಮ್ಮೇಳನದಲ್ಲಿ 125 ಕಲಾಕೃತಿಗಳ ಪ್ರದರ್ಶನಕ್ಕೆ ನಿರ್ಧರಿಸಿದೆ ಎಂದು ಸಮ್ಮೇಳನದ ಚಿತ್ರಕಲಾ ಪ್ರದರ್ಶನ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸಮಿತಿ ಸಭೆ ನಡೆಸಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ಕಲಾವಿದರಿಂದ 305 ಕಲಾಕೃತಿಗಳು ಸ್ಪರ್ಧೆಗೆ ಬಂದಿದ್ದು, ಉತ್ತಮವಾದ 125 ಕಲಾಕೃತಿ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಸಮ್ಮೇಳನದ ವಾಣಿಜ್ಯ ಮಳಿಗೆಗಳ ಸ್ಥಳದಲ್ಲಿ ಪ್ರತ್ಯೇಕ ಆರ್ಟ್​ ಗ್ಯಾಲರಿ ಸ್ಥಾಪಿಸುತ್ತಿದ್ದು, ಕಲಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಪ್ರದರ್ಶನಕ್ಕೆ ಇಡುವ 125 ಕಲಾಕೃತಿಗಳ ಪೈಕಿ ಅತ್ಯುತ್ತಮ 20 ಕಲಾಕೃತಿಗಳನ್ನು ಆಯ್ಕೆ ಮಾಡಿ ಸಮ್ಮೇಳನದ ಕೊನೆ ದಿನ ನಗದು ಪ್ರಶಸ್ತಿ, ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಇತ್ತೀಚೆಗೆ ಸಮ್ಮೇಳನ ನಿಮಿತ್ತ ನಡೆಸಲಾದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ 23 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದೊಂದಿಗೆ 25 ಕಲಾವಿದರನ್ನೊಳಗೊಂಡ ಕಲಾ ಶಿಬಿರ ಸಮ್ಮೇಳನದಲ್ಲಿ ಹಮ್ಮಿಕೊಳ್ಳಲು ಸಭೆ ತೀರ್ಮಾನಿಸಿದೆ. 85 ಸಮ್ಮೇಳನಾಧ್ಯಕ್ಷರ ಭಾವಚಿತ್ರಗಳು, ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳು, ಸಾಹಿತಿಗಳ ಕಿರು ಟಿಪ್ಪಣೆ ಇರುವ ಭಾವಚಿತ್ರ, ಕಲ್ಯಾಣ ಕರ್ನಾಟಕದ ಸ್ಮಾರಕ, ಕವಿಗಳು, ತತ್ವಪದಕಾರರು, ಶರಣರು ಮುಂತಾದವರ 50 ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿಯೇ ಕಲಾವಿದರಿಂದ ಚಿತ್ರ ಬಿಡಿಸುವ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಲಬುರಗಿ-ಬೀದರ ಹಾಲು ಒಕ್ಕೂಟ ನಿಗಮದ ಅಧ್ಯಕ್ಷ ಆರ್.ಕೆ. ಪಾಟೀಲ್, ಸಮಿತಿ ಕಾರ್ಯಾಧ್ಯಕ್ಷರಾದ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಂ. ರಾಚಪ್ಪ, ಹಿರಿಯ ಕಲಾವಿದ ನಾಡೋಜ ಜೆ.ಎಸ್. ಖಂಡೇರಾವ, ಎಸ್.ಎಸ್. ಗಾರಂಪಳ್ಳಿ, ಡಾ. ವಿ.ಜಿ. ಅಂದಾನಿ, ಡಾ. ಎ.ಎಸ್. ಪಾಟೀಲ್, ಬಸವರಾಜ ಜಾನೆ, ಡಾ.ಎಸ್.ಎಂ. ನೀಲಾ, ಅಪ್ಪಾಸಾಹೇಬ ಕುಲಕರ್ಣಿ, ಶರಣಗೌಡ ಪಾಟೀಲ್ ಇದ್ದರು.