ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಅಕ್ಷರ ಜಾತ್ರೆ ಕನ್ನಡ ಸಾಹಿತ್ಯ ಸಮ್ಮೇಳನ 8 ನೇ ಬಾರಿಗೆ ನಾಲ್ಕು ದಿನಗಳ ಹಿಂದೆ ಪೂರ್ಣಗೊಂಡಿದೆ. ಇನ್ನು ಇದರಲ್ಲಿ ಕೈಗೊಂಡಿರುವ ನಿರ್ಣಯಗಳು ಜಾರಿಗೊಳ್ಳುತ್ತವೆಯೇ? ಅಥವಾ ಸಮ್ಮೇಳನವೇ ಕಾಟಾಚಾರಕ್ಕೆ ಎಂಬಂತೆ ನಡೆದಿದೆ, ನಿರ್ಣಯಗಳು ಸಹ ನಿರ್ಣಯಗಳಾಗಿಯೇ ಉಳಿಯುತ್ತವೆಯೇ ಎಂಬುದರ ಸುತ್ತ ಚರ್ಚೆಗಳು ಆರಂಭವಾಗಿವೆ.
ನಾಡು ನುಡಿಯ ಬಗ್ಗೆ ಹೆಚ್ಚಿನ ಒಲವು ಬೆಳೆಸುವ, ಮಾತೃಭಾಷೆ ಮತ್ತು ಸಾಹಿತ್ಯದ ಮಹತ್ವ ಸಾರುವ, ಮಹತ್ವದ ವಿಚಾರಗಳ ಚಿಂತನ-ಮಂಥನ, ಉತ್ಸವದ ಮೂಲಕ ಭಾಷೆಯ ಕಂಪು ಪಸರಿಸುವ ಮತ್ತು ಕನ್ನಡಿಗರನ್ನು ಒಗ್ಗೂಡಿಸುವುದು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ಉದ್ದೇಶ. ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾಮಟ್ಟದ 8 ಸಮ್ಮೇಳನಗಳು ನಡೆದಿವೆ. ಇದರಲ್ಲಿ ಭಾಷೆ, ನೆಲ-ಜಲ ಸೇರಿ ಕನ್ನಡ, ಜನಪರ ಮತ್ತು ಸ್ಥಳೀಯ ಅಭಿವೃದ್ಧಿ ವಿಚಾರವಾಗಿ ಅನೇಕ ನಿರ್ಣಯಗಳನ್ನು ಕೈಗೊಂಡಿದ್ದು ಇದರಲ್ಲಿ ಬೆರಳೆಣಿಕೆಯಲ್ಲಿ ಸಾಕಾರಗೊಂಡಿದ್ದರೆ, ಮತ್ತೆ ಹಲವು ಈಗಲೂ ಕನಸಾಗಿಯೇ ಉಳಿದಿದೆ. ಆಂಧ್ರಗಡಿ ಭಾಗದಲ್ಲಿರುವ ಜಿಲ್ಲೆಯಲ್ಲಿ ತೆಲುಗು ಪ್ರಭಾವ ಹೆಚ್ಚಾಗಿದೆ. ಇದರ ನಡುವೆ ಆಂಗ್ಲ ವ್ಯಾಮೋಹದಿಂದ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಒಲವು ತೋರುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಕುಸಿದು ಒಂದೊಂದೇ ಬಾಗಿಲು ಮುಚ್ಚುತ್ತಿವೆ.
ಮತ್ತೊಂದೆಡೆ ಅಂತರ್ಜಲಮಟ್ಟ ಕುಸಿತ, ಕೊಳವೆಬಾವಿ ವೈಲ್ಯ, ಫ್ಲೋರೈಡ್ ನೀರು ಸೇರಿ ನಾನಾ ಸಮಸ್ಯೆಗಳು ಈ ಭಾಗದ ಜನರನ್ನು ಬಾಧಿಸುತ್ತಿದ್ದು, ಇವೆಲ್ಲವುಗಳ ಬಗ್ಗೆ 8 ಸಮ್ಮೇಳನಗಳಲ್ಲಿಯೂ ಚರ್ಚಿಸಿ, ಪರಿಹಾರಾತ್ಮಕವಾಗಿ ಹಲವು ನಿರ್ಣಯಗಳನ್ನು ಮಂಡಿಸಲಾಗಿದೆ. ಬಳಿಕ ಸರ್ಕಾರದ ಗಮನ ಸೆಳೆದಿದ್ದು ಇದರಲ್ಲಿ ಕನ್ನಡ ಭವನ ನಿರ್ಮಾಣ, ಶಾಲೆಗಳ ಅಭಿವೃದ್ಧಿ ಒತ್ತು ಸೇರಿ ಹಲವು ಕೆಲಸಗಳಾಗಿವೆ. ಆದರೆ, ಪ್ರಮುಖ ಸಮಸ್ಯೆಗಳು ಇನ್ನೂ ಕಾಡುತ್ತಲೇ ಇವೆ.
2021ರ ಸಮ್ಮೇಳನದ ನಿರ್ಣಯಗಳು : ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳನ್ನು ಮುಚ್ಚದೇ ಕನ್ನಡ ಜಾಗೃತಿ ವಿಶೇಷ ಕಾರ್ಯಕ್ರಮ ಕೈಗೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ, ಕಸಾಪ ಮತ್ತು ಇತರ ಸಂಘ ಸಂಸ್ಥೆಗಳಿಂದ ನಿರಂತರವಾಗಿ ಕನ್ನಡ ಭಾಷಾ ಪ್ರೇಮ ಬೆಳೆಸಲು ಅಭಿಯಾನ, ಅರಣ್ಯೇತರ ಪ್ರದೇಶಗಳಲ್ಲಿ ಹಸಿರೀಕರಣ, ಶೇ.12 ರಿಂದ ಶೇ.22ಕ್ಕೆ ಅರಣ್ಯ ಪ್ರದೇಶ ಹೆಚ್ಚಿಸುವುದು, ಮಳೆ ನೀರು ಕೊಯ್ಲಿಗೆ ವಿಶೇಷ ಆದ್ಯತೆ, ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಪಡೆಯುವುದು, ಎಚ್.ಎನ್.ವ್ಯಾಲಿ ಯೋಜನೆಯ ನೀರಿನ ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತಾಯಿಸುವ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆದರೆ ಇವುಗಳಲ್ಲಿ ಸಾಕಾರವಾಗುವವು ಎಷ್ಟು, ಹೇಳಿಕೆಗಷ್ಟೇ ಸೀಮಿತವಾಗುವವು ಎಷ್ಟು ಎಂಬ ಚರ್ಚೆಗಳು ನಡೆಯುತ್ತಿವೆ.
2018ರ ಸಮ್ಮೇಳನದ ನಿರ್ಣಯಗಳು : ಎಲ್ಲ ಸರ್ಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹಾರ, ರಾಜ್ಯದ ಎಲ್ಲ ನ್ಯಾಯಾಲಯದ ತೀರ್ಪುಗಳು ಮಾತಭಾಷೆಯಲ್ಲಿಯೇ ಪ್ರಕಟ, ಕನ್ನಡ ಮಾಧ್ಯಮ ಶಾಲೆಗಳ ಅಸ್ತಿತ್ವದ ಬಗ್ಗೆ ಗಂಭೀರ ಚಿಂತನೆ ಮತ್ತು ಕಠಿಣ ನಿಯಮಗಳ ಜಾರಿ, ಗಡಿನಾಡಲ್ಲಿ ಕನ್ನಡ ವಾತಾವರಣ ನಿರ್ಮಾಣ, ಕನ್ನಡ ಶಾಲೆಗಳ ಸಂರಕ್ಷಣೆ ಮತ್ತು ಕನ್ನಡ ಮಾಧ್ಯಮದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡುವಿಕೆಗೆ ಒತಾಯಿಸುವ ನಿರ್ಣಯಗಳನ್ನು 2018 ನೇ ಸಾಲಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಗಿತ್ತು, ಇದರಲ್ಲಿ ಒಂದೆರಡಲ್ಲಿ ಅಲ್ಪಸ್ವಲ್ಪ ಯಶಸ್ಸು ಕಂಡಿದ್ದರೆ ಉಳಿದವು ಹಳ್ಳ ಹಿಡಿದಿವೆ.
ಸಮ್ಮೇಳನದ ನಿರ್ಣಯಗಳು ಕೇವಲ ಘೋಷಣೆಗಷ್ಟೇ ಸೀಮಿತವಾಗಬಾರದು. ಆಡಳಿತ ವ್ಯವಸ್ಥೆಯ ಮೇಲೆ ಒತ್ತಡ ಹೇರಿ, ಸಾಕಾರಕ್ಕೆ ಕಸಾಪ ಶ್ರಮಿಸಬೇಕು. ಡಾ ಕೆ.ಅಮರನಾರಾಯಣ, ಕಸಾಪ ಜಿಲ್ಲಾ 8ನೇ ಸಮ್ಮೇಳನಾಧ್ಯಕ್ಷ ಸಮ್ಮೇಳನದ ನಿರ್ಣಯಗಳ ಅನುಷ್ಠಾನಕ್ಕೆ ಕಸಾಪ ಸರ್ಕಾರಕ್ಕೆ ಶಿಾರಸು ಮಾಡಬಹುದೇ ಹೊರತು ಆದೇಶಿಸುವ ಅಧಿಕಾರವನ್ನು ಹೊಂದಿಲ್ಲ. ಸ್ಥಳೀಯವಾಗಿ ಹಲವು ಬೇಡಿಕೆಗಳು ಸಾಕಾರಗೊಂಡಿವೆ. ಕೈವಾರ ಎನ್.ಶ್ರೀನಿವಾಸ್, ಜಿಲ್ಲಾ ಕಸಾಪ ಅಧ್ಯಕ್ಷ, ಚಿಕ್ಕಬಳ್ಳಾಪುರ ಸಮ್ಮೇಳನಗಳು ಕಾಟಾಚಾರಕ್ಕೆ ನಡೆಯುತ್ತಿರುವುದು, ಜನಪ್ರತಿನಿಧಿಗಳು ಗೈರಾಗಿರುವುದು ಸರ್ವಾನುಮತದ ನಿರ್ಣಯಗಳು ಕಡೆಗಣಿಸಲು ಕಾರಣವಾಗಿದೆಯೇ ಎಂಬ ಅನುಮಾನ ಮೂಡಿದೆ. ಶಿವಕುಮಾರ್, ಉಪನ್ಯಾಸಕ