ಜಮಖಂಡಿ: ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅ.13 ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ನಾಡೋಜ ಜಗದೀಶ ಗುಡಗುಂಟಿ ತಿಳಿಸಿದರು.
ನಗರದ ರಮಾ ನಿವಾಸದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳ ಪ್ರಧಾನ ವೇದಿಕೆ, ತುಂಗಳದ ಸಾಹಿತಿ ಎಂ.ಎಸ್. ಸಿಂಧೂರ ಮಹಾದ್ವಾರ, ಹುಲ್ಯಾಳದ ಮಹಾದೇವಪ್ಪ ಚಿಮ್ಮಡ ಮಂಟಪ ದ್ವಾರಗಳು, ಹುನ್ನೂರಿನ ಪ್ರಲ್ಹಾದ ಗುರವ(ಗ್ಯಾರಂಟೆಪ್ಪ) ಮಳಿಗೆಗಳು, ಹುನ್ನೂರಿನ ಪಾರ್ವತಿ ಪಾಲಭಾವಿಮಠ ದಾಸೋಹದ್ವಾರ ನಿರ್ಮಿಸಲಾಗುವುದು. ಭಾವತೀರ್ಥ ಸ್ಮರಣ ಸಂಚಿಕೆ ಬಿಡುಗಡೆ ಜತೆಗೆ ಸ್ವರ್ಣ ರಥೋತ್ಸವ, 3 ಗೋಷ್ಠಿಗಳು ನಡೆಯಲಿವೆ ಎಂದರು.
ಸ್ವಾಗತ ಸಮಿತಿ, ಹಣಕಾಸು ಸಮಿತಿ, ವೇದಿಕೆ ಸಮಿತಿ, ಊಟ ಮತ್ತು ಉಪಾಹಾರ ಸಮಿತಿ, ಮಳಿಗೆಗಳ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ಸಮಿತಿ, ಮಹಿಳಾ ಸಮಿತಿ, ಪ್ರಚಾರ ಸಮಿತಿ, ಸ್ಮರಣ ಸಂಚಿಕೆ ಸಂಪಾದಕ ಮಂಡಳಿ ಸೇರಿ ವಿವಿಧ ಸಮಿತಿ ರಚಿಸಲಾಗಿದೆ. ಹಳೇ ತಹಸೀಲ್ದಾರ್ ಕಚೇರಿಯಿಂದ ಹನುಮಾನ ಚೌಕ್, ಅರ್ಬನ್ ಬ್ಯಾಂಕ್, ಬಸವ ಭವನದವರೆಗೆ ಮೆರವಣಿಗೆ ನಡೆಯಲಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡಿ, ನಗರದ ಬಸವ ಭವನದಲ್ಲಿ ಅ.13 ರಂದು ಬೆಳಗ್ಗೆ 7.15ಕ್ಕೆ ಧ್ವಜಾರೋಹಣ ನಡೆಯಲಿದೆ. ಸಮ್ಮೇಳನಾಧ್ಯಕ್ಷ ಸಹಜಾನಂದ ಶ್ರೀಗಳ ನೇತೃತ್ವದಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರ ಮೆರವಣಿಗೆಗೆ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ ಚಾಲನೆ ನೀಡಲಿದ್ದಾರೆ ಎಂದರು.
ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅಥಣಿಯ ಪ್ರಭುಚನ್ನಬಸವ ಶ್ರೀಗಳು ಸಾನ್ನಿಧ್ಯ, ರುದ್ರಾವಧೂತ ಮಠದ ಸಹಜಾನಂದ ಅವಧೂತರು ಸಮ್ಮೇಳಾನಾಧ್ಯಕ್ಷತೆ, ಶಾಸಕ ನಾಡೋಜ ಜಗದೀಶ ಗುಡಗುಂಟಿ ಅಧ್ಯಕ್ಷತೆ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಆಶಯ ನುಡಿ ಹಂಚಿಕೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸ್ಮರಣ ಸಂಚಿಕೆ, ಮಾಜಿ ಶಾಸಕ ಆನಂದ ನ್ಯಾಮಗೌಡ ಲೇಖಕರ ಕೃತಿ ಬಿಡುಗಡೆಗೊಳಿಸುವರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಸೀ ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ತುಂಗಳ ಮಳಿಗೆ ಉದ್ಘಾಟಿಸುವರು. ಸಮ್ಮೇಳನದ ಕಾರ್ಯಾಧ್ಯಕ್ಷ ಜಿ.ಎಸ್. ನ್ಯಾಮಗೌಡ, ಕೋಶಾಧ್ಯಕ್ಷ ಉಮೇಶ ಮಹಾಬಳಶೆಟ್ಟಿ ಮತ್ತಿತರರು ಉಪಸ್ಥಿತರಿರುವರೆಂದು ತಿಳಿಸಿದರು.
ಗೋಷ್ಠಿ 1ರಲ್ಲಿ ಕೊಣ್ಣೂರ ಹೊರಗಿನ ಕಲ್ಯಾಣಮಟದ ಡಾ. ವಿಶ್ವಪ್ರಭುದೇವ ಶ್ರೀಗಳು ಸಾನ್ನಿಧ್ಯ ವಹಿಸುವರು. ಹಿರಿಯ ಸಾಹಿತಿ ಪ್ರೊ.ಬಿ.ಪಿ. ನ್ಯಾಮಗೌಡ ಅಧ್ಯಕ್ಷತೆ ವಹಿಸುವರು. ಡಾ. ಸುನಂದಾ ಶಿರೂರ, ಮಹಾಲಿಂಗಪ್ಪ ಆಲಬಾಳ, ಡಾ.ವೈ.ವೈ. ಕೊಕ್ಕನವರ ಉಪನ್ಯಾಸ ನೀಡುವರು.
ಗೋಷ್ಠಿ 2ರ ಕವಿಗೋಷ್ಠಿಯಲ್ಲಿ ಜಕನೂರಿನ ಮಾದುಲಿಂಗ ಶ್ರೀಗಳು, ಸಾಹಿತಿ ಡಾ. ಶ್ರೀದೇವಿ ಸುವರ್ಣಖಂಡಿ ಅಧ್ಯಕ್ಷತೆ ವಹಿಸುವರು. ಸಾಹಿತಿ ಗುರುನಾಥ ಸುತಾರ ಆಶಯ ನುಡಿ ಹಂಚಿಕೊಳ್ಳುವರು. ತಾಲೂಕಿನ ವಿವಿಧ ಕವಿಗಳು ಪಾಲ್ಗೊಳ್ಳುವರು.
ಗೋಷ್ಠಿ 3ರಲ್ಲಿ ವಿಶೇಷ ಉಪನ್ಯಾಸ ಮತ್ತು ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಸಾನ್ನಿಧ್ಯ, ಸಾಹಿತಿ ಡಾ. ಸಂಗಮೇಶ್ವರ ಮಟೋಳಿ ಅಧ್ಯಕ್ಷತೆ ವಹಿಸುವರು. ಸಮಾವೇಶದ ನಿರ್ಣಯ ಮಂಡಿಸಲಾಗುವುದು. ಸನ್ಮಾನ ಮತ್ತು ಸಮಾರೋಪ ಕಾರ್ಯಕ್ರಮದಲ್ಲಿ ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ, ಹಿರಿಯ ನ್ಯಾಯವಾದಿ ಎನ್.ಎಸ್. ದೇವರವರ ಅಧ್ಯಕ್ಷತೆ, ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಆಗಮಿಸುವರು. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಸಮ್ಮೇಳನದ ಕಾರ್ಯಾಧ್ಯಕ್ಷ ಜಿ.ಎಸ್. ನ್ಯಾಮಗೌಡ, ಕೋಶಾಧ್ಯಕ್ಷ ಡಾ. ಉಮೇಶ ಮಹಾಬಳಶೆಟ್ಟಿ, ನಾಡೋಜ ಡಾ.ಎಚ್.ಜಿ. ದಡ್ಡಿ, ಪ್ರೊ. ಬಸವರಾಜ ಕಡ್ಡಿ, ವಿನೋದ ಲೋಣಿ, ಎನ್.ಬಿ. ಮಾಲಗಾರ, ರಾಜೇಶ್ವರಿ ಹಿರೇಮಠ, ಚಂದ್ರಕಲಾ ಜನಗೌಡ ಇತರರಿದ್ದರು.