ಕಲಬುರಗಿ: ಕಲಬುರಗಿಯಲ್ಲಿ ನಡೆದಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಪ್ರಚಾರದ ವೇದಿಕೆಯಾಗಿಯೂ ಕಾಣಿಸಿದೆ.
ಗುರುವಾರ ಸಮ್ಮೇಳನದ ಮೊದಲನೇ ಚುನಾವಣಾ ಸ್ಪರ್ಧಾಕಾಂಕ್ಷಿಗಳು ತಮ್ಮ ಪರವಾಗಿ ಬಿರುಸಿನ ಪ್ರಚಾರ ಮಾಡಿಕೊಂಡರು. ಹಾಲಿ ಅಧ್ಯಕ್ಷ ಮನುಬಳಿಗಾರ್ ಅವರ ಅವಧಿ ಇನ್ನೇನು ಕೊನೆ ಹಂತಕ್ಕೆ ಬಂದಿದ್ದು, ಇಷ್ಟರಲ್ಲೇ ಚುನಾವಣೆ ನಡೆಯುವುದಿದೆ. ಹೀಗಾಗಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟ ಆಕಾಂಕ್ಷಿಗಳು ಪ್ರಚಾರದಲ್ಲಿ ತೊಡಗಿಕೊಂಡರು.
ಉದ್ಘಾಟನಾ ಸಮಾರಂಭ ನಡೆದ ಸಭಾಂಗಣದಲ್ಲೇ ತಮ್ಮ ಕರಪತ್ರಗಳನ್ನು ಹಂಚುವ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ನಡೆಸಿದರು. ಜತೆಗೆ ಜಿಲ್ಲೆ ಹಾಗೂ ತಾಲೂಕು ಕಸಾಪ ಘಟಕಗಳನ್ನು ಭೇಟಿ ಮಾಡಿ ಮನವೊಲಿಸಲು ಪ್ರಯತ್ನಿಸಿದರು.
ಈ ಪ್ರಯತ್ನದಲ್ಲಿ ಸಿ.ಕೆ.ರಾಮೇಗೌಡ, ಮಹೇಶ್ ಜೋಷಿ ಮುಂಚೂಣಿಯಲ್ಲಿ ಕಾಣಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗಿನ ತಮ್ಮ ಒಡನಾಟ, ಕನ್ನಡ ಪರ ಹೋರಾಟಗಳು, ಸಮಾಜ ಸೇವೆ ಸೇರಿ ಇತರ ಮಾಹಿತಿಯನ್ನು ಮತದಾರರಿಗೆ ತಲುಪಿಸಲು ಬೆವರು ಹರಿಸಿದರು.
ಕೆಲವರ ಸ್ವತ್ತಾದ ಕನ್ನಡ ಸಾಹಿತ್ಯ ಪರಿಷತ್ತನ್ನು ತಮ್ಮೆಲ್ಲರ ಸುಸ್ತಾಗಿ ಪರಿವರ್ತನೆ ಮಾಡಿ, ಸಂಘದ ಜೊತೆಗೂಡಿ ಸಾಗುವ ಕನಸು ನನ್ನದು ಎಂದು ಮಹೇಶ್ ಜೋಷಿ ಹೇಳಿಕೊಂಡರೆ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಮಾತಿಗೆ ಶಕ್ತಿ ಮತ್ತು ಚೈತನ್ಯವನ್ನು ತಂದಯ ಅದು ಕನ್ನಡಿಗರ ಬದುಕಿಗೆ ಸಂಬಂಧಿಸಿದಂತೆ ಸದಾ ಪ್ರಸ್ತುತವಾಗಿ ಇರುವಂತೆ ನೋಡಿಕೊಳ್ಳುವುದು ತಮ್ಮ ಕರ್ತವ್ಯ ಎಂದು ಸಿದ್ದರಾಮೇಗೌಡ ಪ್ರತಿಕ್ರಿಯಿಸಿದ್ದಾರೆ.