ಮಂಡ್ಯ: ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20, 21 ಮತ್ತು 22ರಂದು ಮಂಡ್ಯದಲ್ಲಿ ನಡೆಯಲಿದೆ. ಇದಕ್ಕೆ ಪೂರಕವಾಗಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭುವನಗಿರಿ ಕ್ಷೇತ್ರದ ಭುವನೇಶ್ವರಿ ಸನ್ನಿಧಿಯಿಂದ ಸೆ.22ರಂದು ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಷಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಭುವನಗಿರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಅಥವಾ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರಿಂದ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಾಗುವುದು. ಈ ಸಂದರ್ಭದಲ್ಲಿ ಸ್ಕೌಟ್ ಆ್ಯಂಡ್ ಗೈಡ್, ಎನ್‌ಸಿಸಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು,ಎನ್‌ಎಸ್ ಎಸ್ ಸ್ವಯಂ ಸೇವಕರು ಭಾಗವಹಿಸಲು ತಿಳಿಸಲಾಗುವುದು. 87ನೇ ಸಮ್ಮೇಳನವಾಗಿರುವುದರಿಂದ ಈ ರಥಯಾತ್ರೆ 87 ದಿನ ರಾಜ್ಯಾದ್ಯಂತ ಸಂಚರಿಸಿ ಜನಜಾಗೃತಿ ಮೂಡಿಸಲಾಗುವುದು ಎಂದರು.
ಎಲ್ಲ ನಗರ, ಪಟ್ಟಣಗಳಲ್ಲಿ ಸಂಚರಿಸಲು ಸೂಕ್ತವಾಗುವಂತೆ ರಥ ನಿರ್ಮಾಣ ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಸಂಚರಿಸುವಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ ಹಾಗೂ ಆಯಾ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳು ಭಾಗವಹಿಸುವಂತೆ ಸೂಚಿಸಲಾಗುವುದು. ಈ ರಥ ಸಂಚರಿಸುವ ಮಾರ್ಗದ ಬಗ್ಗೆ ತಿಳಿಯಲು ಜಿಪಿಎಸ್ ಅಳವಡಿಸಲಾಗುವುದು. ಭುವನಗಿರಿಯ ಸನ್ನಿಧಿಯಲ್ಲಿ ಹಚ್ಚುವ ಕನ್ನಡ ದೀಪದಿಂದ ಸಮ್ಮೇಳನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಗುವುದು. ಕನ್ನಡ ನಾಡು ನುಡಿಯ ಮಹತ್ವವನ್ನು ಸಾರುವ ಚಿತ್ರಗಳನ್ನು ಅಳವಡಿಸಿ ಎಲ್‌ಇಡಿ ದೀಪಗಳಿಂದ ರಥವನ್ನು ಬೆಳಗಿಸಲಾಗುವುದು. ರಥ ಸಂಚಾರದ ಬಗ್ಗೆ ಜನರಿಗೆ ತಿಳಿಸಲು ಮತ್ತೊಂದು ವಾಹನದ ಮೂಲಕ ಮುಂಚಿತವಾಗಿ ಧ್ವನಿವರ್ಧಕದ ಮೂಲಕ ಘೋಷಣೆ ಮಾಡಿಸಲಾಗುವುದು ಎಂದು ವಿವರಿಸಿದರು.
ಜಿಲ್ಲಾ ರಥ ನಿರ್ಮಾಣ: ಒಂದು ರಥ ರಾಜ್ಯಾದ್ಯಂತ ಸಂಚರಿಸಿದರೆ ಜಿಲ್ಲೆಯ ಜನತೆಗೆ ಮಾಹಿತಿ ತಿಳಿಸಲು ಜಿಲ್ಲಾ ವ್ಯಾಪ್ತಿಯಲ್ಲಿ ಮತ್ತೊಂದು ಪ್ರತ್ಯೇಕ ರಥ ಸಂಚಾರ ಕೈಗೊಳ್ಳಲು ನಿರ್ಧರಿಸಲಾಗಿದೆ. ನ.15ರಂದು ಶ್ರೀರಂಗಪಟ್ಟಣದ ನಿಮಿಷಾಂಭ ದೇಗುಲದಿಂದ ಹೊರಡುವ ಈ ರಥ ಜಿಲ್ಲೆಯ 45 ಹೋಬಳಿ 233 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಲಿದೆ ಎಂದು ಮಹೇಶ ಜೋಷಿ ಹೇಳಿದರು. ಅಂತೆಯೇ ರಥ ನಿರ್ಮಾಣ ಮತ್ತು ಸಂಚಾರದ ಬಗ್ಗೆ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕಸಾಪ ಕೋಶಾಧ್ಯಕ್ಷ ಪಟೇಲ್ ಪಾಂಡು, ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ.ಪಣ್ಣೆದೊಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್, ಶಿರಸ್ತೇದಾರ್ ಲಕ್ಷ್ಮೀ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಸಂಘ ಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್, ತಾಲೂಕು ಅಧ್ಯಕ್ಷ ಚಂದ್ರಲಿಂಗು, ನಗರ ಘಟಕದ ಅಧ್ಯಕ್ಷೆ ಸುಜಾತಾಕೃಷ್ಣ, ಬಸವೇಗೌಡ, ಚಂದ್ರಶೇಖರ್ ಇತರರಿದ್ದರು.