ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಚುನಾವಣೆಗೆ ನ. 21ರಂದು ದಿನಾಂಕ ನಿಗದಿಪಡಿಸಿ ಚುನಾವಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಪರಿಷತ್ತಿನ ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ನ.21ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, 3,10,109 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ನ.24 ರಂದು ಪರಿಷತ್ತಿನ ಚುನಾವಣಾಧಿಕಾರಿ ಕೇಂದ್ರ ಕಚೇರಿಯಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಗೆ ಎಲ್ಲ ಜಿಲ್ಲೆಗಳಿಂದ ಬಂದ ಮತಗಳು ಹಾಗೂ ಅಂಚೆ ಮತಗಳನ್ನು ಕ್ರೋಢೀಕರಿಸಿ, ಫಲಿತಾಂಶ ಘೋಷಿಸಲಿದ್ದಾರೆ. ಅದೇ ದಿನ ಗಡಿನಾಡ ಘಟಕಗಳ ಅಧ್ಯಕ್ಷರ ಚುನಾವಣೆಗೆ ಸಂಬಂಧಪಟ್ಟ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಿ, ಫಲಿತಾಂಶ ಪ್ರಕಟಿಸಲಾಗುವುದು. ಜಿಲ್ಲಾ ಘಟಕಗಳ ಅಧ್ಯಕ್ಷರ ಫಲಿತಾಂಶ ನ.21ರಂದೇ ಘೊಷಣೆಯಾಗಲಿದೆ.
ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧಿಗಳು: ಮಹೇಶ್ ಜೋಶಿ, ಶೇಖರಗೌಡ ಮಾಲಿ ಪಾಟೀಲ, ವ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ, ಸಂಗಮೇಶ ಬಾದವಾಡಗಿ, ಮ.ಚಿ. ಕೃಷ್ಣ, ರಾಜಶೇಖರ ಮುಲಾಲಿ, ಬಸವರಾಜ ಶಿ. ಹಳ್ಳೂರ, ಬಾಡದ ಭದ್ರಿನಾಥ್, ಶಿವರಾಜ ಪಾಟೀಲ, ಸರಸ್ವತಿ ಶಿವಪ್ಪ ಚಿಮ್ಮಲಗಿ, ವೈ. ರೇಣುಕಾ, ಕೆ. ರತ್ನಾಕರ ಶೆಟ್ಟಿ, ವಾಲ್ಮೀಕಪ್ಪ ಹ. ಯಕ್ಕರನಾಳ, ಶಿವಪ್ಪ ಮಲ್ಲಪ್ಪ ಬಾಗಲ, ಕೆ. ರವಿ ಅಂಬೇಕರ, ನ. ಶ್ರೀ. ಸುಧೀಂದ್ರರಾವ್, ಶರಣಬಸಪ್ಪ ಕಲ್ಲಪ್ಪ ದಾನಕೈ, ಶಿವರುದ್ರಸ್ವಾಮಿ, ಮಾಯಣ್ಣ ಹಾಗೂ ಪ್ರಮೋದ್ ಹಳಕಟ್ಟಿ ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ.