ಜಿಲ್ಲೆ

ಕಸಾಪ ಅಧ್ಯಕ್ಷರ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿ(ಕಸಾಪ)ನಲ್ಲಿ ಆಜೀವ ಸದಸ್ಯತ್ವ ಹೊಂದಿರುವ ಲೇಖಕಿ ಡಾ. ವಸುಂಧರಾ ಭೂಪತಿ ಅವರು ತಮ್ಮ ಸದಸ್ಯತ್ವ ಅಮಾನತುಗೊಳಿಸಿರುವುದನ್ನು ಖಂಡಿಸಿ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಮತ್ತು ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಪರಿಷತ್ತಿನ ಈ ನಡೆಗೆ ಸಾಹಿತ್ಯ ವಲಯದಲ್ಲಿ ಖಂಡನೆ ವ್ಯಕ್ತವಾಗಿದೆ.

ಈ ಸಂಬಂಧ ಸೋಮವಾರ ರಾಜ್ಯ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಿದ ಡಾ. ವಸುಂಧರಾ ಭೂಪತಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನನ್ನ ಆಜೀವ ಸದಸ್ಯತ್ವವನ್ನು ಅಮಾನತುಗೊಳಿಸುವ ಮೂಲಕ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿದ್ದಾರೆ. ಮಹೇಶ ಜೋಶಿ ಮತ್ತು ಶಿವಾನಂದ ಶೆಲ್ಲಿಕೇರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದೂರು ಸಲ್ಲಿದ್ದಾರೆ. ಜತೆಗೆ ನನಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ವೈದ್ಯ ಸಾಹಿತಿ ವಸುಂಧರಾ ಭೂಪತಿ ಮತ್ತು ಬರಹಗಾರ ಜಾಣಗೆರೆ ವೆಂಕಟರಾಮಯ್ಯ ಅವರ ಕಸಾಪ ಸದಸ್ಯತ್ವ ಅವಮಾನತು ಮಾಡಲಾಗಿದೆ. ಅ.5ರಂದು ಬಾಗಲಕೋಟೆಯ ಕಲ್ಲಹಳ್ಳಿಯಲ್ಲಿ ನಡೆಯಲಿರುವ ವಾರ್ಷಿಕ ಸರ್ವ ಸದಸ್ಯರ ಸಭೆಗೆ ಬರುವಂತಿಲ್ಲ. ಒಂದುವೇಳೆ ಬಂದರೆ ಅವರನ್ನು ಕತ್ತು ಹಿಡಿದು ದಬ್ಬಲಾಗುವುದು ಎಂಬ ಶಿವಾನಂದ ಶೆಲ್ಲಿಕೇರಿ ಹೇಳಿಕೆ ನೀಡಿದ್ದಾರೆ ಹಾಗೂ ಮಹೇಶ್ ಜೋಶಿ ಅವರು ಈ ಸದಸ್ಯತ್ವವನ್ನು ಅಮಾನತುಗೊಳಿಸಿದ್ದಾರೆ.

ನಾನು ಕಸಾಪ ಆಜೀವ ಸದಸ್ಯಳಾಗಿದ್ದೇನೆ. ಕಸಾಪ ಅಧ್ಯಕ್ಷರ ಸಂವಿಧಾನಬಾಹಿರ ನಡೆ ಕುರಿತ ಕನ್ನಡ ನಾಡು ನುಡಿ ಜಾಗೃತಿ ವೇದಿಕೆಯಿಂದ ಸಹಕಾರ ಇಲಾಖೆಗೆ ದೂರು ನೀಡಿದ್ದೇವೆ. ಆ ದೂರಿನ ಅನ್ವಯ ಸಹಕಾರ ಇಲಾಖೆ ತನಿಖಾ ಸಮಿತಿ ರಚಿಸಿ ಕಸಾಪ ಅಧ್ಯಕ್ಷರ ವಿರುದ್ಧ ತನಿಖೆ ಆರಂಭಿಸಿದೆ. ಕಸಾಪ ಅಧ್ಯಕ್ಷರು ನಾವು ಎತ್ತಿರುವ ಹಕ್ಕಿನ ಪ್ರಶ್ನೆಗಳಿಗೆ ಉತ್ತರ ನೀಡದೆ ನನ್ನ ಆಜೀವ ಸದಸ್ಯತ್ವವನ್ನೇ ಅಮಾನ್ಯಗೊಳಿಸಿ, ನನ್ನ ಮೇಲೆ ವಿಚಾರಣೆಗೆ ಪತ್ರ ಬರೆದಿದ್ದಾರೆ. ಆದರೆ ಈ ಅಮಾನತನ್ನು ಸಹಕಾರ ಇಲಾಖೆ ರದ್ದಪಡಿಸಿದೆ.

ತಾವು ಈ ಹಿಂದೆ ನಿಕಟಪೂರ್ವ ಮಹಿಳಾ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದ್ದು ಕಸಾಪ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿಲ್ಲ. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದೇನೆ. ವಿಜಯನಗರ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಆದರೆ ಕಸಾಪ ಅಧ್ಯಕ್ಷರ ನಡೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ವಸುಂಧರಾ ಭೂಪತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಭೆಗೆ ಹಾಜರಾಗುವುದಾಗಿ ಸವಾಲು

ಕಸಾಪ ಸದಸ್ಯತ್ವ ಅಮಾನತು ಆದೇಶವನ್ನು ಕಾನೂನಾತ್ಮಕವಾಗಿ ರದ್ದುಪಡಿಸಿಕೊಂಡು ಸಭೆಗೆ ಹಾಜರಾಗುತ್ತೇವೆ ಎಂದು ವಸುಂಧರಾ ಭೂಪತಿ ಮತ್ತು ಜಾಣಗೆರೆ ವೆಂಕಟರಾಮಯ್ಯ ಅವರು ಕಸಾಪ ಅಧ್ಯಕ್ಷರಿಗೆ ಸವಾಲು ಹಾಕಿದ್ದಾರೆ. ನಾವು ಸಭೆಗೆ ಹಾಜರಾಗುವ ಸಂದರ್ಭ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಕಸಾಪ ಅಧ್ಯಕ್ಷರೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೋಟ್

ವಸುಂಧರಾ ಭೂಪತಿ, ಜಾಗಣೆರೆ ವೆಂಕಟರಾಮಯ್ಯ ಅವರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿಲ್ಲ. ಆ ಇಬ್ಬರು ಮಹನೀಯರ ಘನತೆಗೆ ಧಕ್ಕೆ ತರುವಂತೆ ನಡೆದುಕೊಂಡಿಲ್ಲ.

ಶಿವಾನಂದ ಶೆಲ್ಲಿಕೇರಿ, ಬಾಗಲಕೋಟೆ ಕಸಾಪ ಜಿಲ್ಲಾ ಅಧ್ಯಕ್ಷ