ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿ (ಕಸಾಪ)ಗೆ ಅನುದಾನ ಬಿಡುಗಡೆ ಮಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಅವರ ವಿರುದ್ಧ ಪರಿಷತ್ತಿನ ಕಾರ್ಯಕಾರಿ ಸಮಿತಿಯು ಖಂಡನಾ ನಿರ್ಣಯ ಕೈಗೊಂಡಿದೆ.
ನಗರದಲ್ಲಿ ಬುಧವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪರಿಷತ್ತಿಗೆ ವಾರ್ಷಿಕ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಇದಕ್ಕೆ ಕಾರಣರಾಗಿರುವ ಕೆ.ಎಂ.ಗಾಯಿತ್ರಿ ಅವರ ವಿರುದ್ಧ ಖಂಡನಾ ನಿರ್ಣಯ ಕೈಕೊಳ್ಳಲಾಯಿತು. ಈ ನಿರ್ಣಯವನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ಬಿ.ಎಂ.ಪಟೇಲ್‌ಪಾಂಡು ಅವರು ಪತ್ರದ ಮೂಲಕ ಗಾಯಿತ್ರಿ ಅವರ ಗಮನಕ್ಕೆ ತಂದಿದ್ದಾರೆ ಎಂದು ಕಸಾಪ ಮೂಲಗಳು ತಿಳಿಸಿವೆ.
ಖಂಡನಾ ನಿರ್ಣಯ ತಲುಪಿದ ಒಂದು ವಾರದೊಳಗೆ ಗಾಯಿತ್ರಿ ಅವರು ಅನುದಾನ ಬಿಡುಗಡೆ ಮಾಡದಿದ್ದರೆ, ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ನೇತೃತ್ವದಲ್ಲಿ ಕನ್ನಡ ಭವನದ ಎದುರು ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಪ್ರಸಕ್ತ ಸಾಲಿನ ವಾರ್ಷಿಕ ಆಯವ್ಯಯದಲ್ಲಿ ಕಸಾಪಗೆ ಮಂಜೂರಾಗಿರುವ ವಾರ್ಷಿಕ ಅನುದಾನದ ಮೊದಲ ಕಂತು 1.25 ಕೋಟಿ ರೂ. ಇನ್ನೂ ಬಿಡುಗಡೆ ಆಗದಿರುವ ಬಗ್ಗೆ ಇದಕ್ಕೂ ಮೊದಲು ಚರ್ಚಿಸಲಾಯಿತು. ಇದರಿಂದ ಪರಿಷತ್ತಿನ ಸಿಬ್ಬಂದಿಗೆ ವೇತನ, ನಿತ್ಯ ಚಟುವಟಿಕೆಗಳು, ಕನ್ನಡ ಪರ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿರುವ ಬಗ್ಗೆ ಕಳವಳ ವ್ಯಕ್ತವಾಯಿತು.