ಬೆಂಗಳೂರು: ಕಸಾಪ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳ ಸತ್ಯಾಸತ್ಯತೆಯನ್ನು ತಿಳಿಯಲು ಈಗಾಗಲೇ ಸಹಕಾರಿ ಇಲಾಖೆ ವಿಚಾರಣೆ ಆರಂಭಿಸಿದೆ. ಹೀಗಿರುವಾಗ ಅದೇ ದೂರು ಅರ್ಜಿಗಳ ಮೇಲೆ ಮತ್ತೊಂದು ವಿಚಾರಣೆಗೆ ಅವಕಾಶ ಇಲ್ಲ ಎಂದು ಕಸಾಪ ತಿಳಿಸಿದೆ.
ಬುಧವಾರ(ಜು.30) ಕಾರ್ಯಕಾರಿ ಸಮಿತಿಯಲ್ಲಿ ತೆಗೆದುಕೊಂಡ ನಿರ್ಧಾರದಂತೆ, ಈ ವಿಷಯವನ್ನು ಪ್ರಕಟಣಾ ಸಮಿತಿ ಮತ್ತು ಹಣಕಾಸು ಸಮಿತಿಗಳಲ್ಲಿಯೂ ಚರ್ಚಿಸಲಾಗಿದೆ. ಅಲ್ಲದೆ ಗುರುವಾರ (ಜು.31) ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೆಪ್ಟೆಂಬರ್ 15ರೊಳಗೆ ದಾಖಲೆ ಸಹಿತವಾಗಿ ಉತ್ತರ ನೀಡುವುದಾಗಿ ವಿಚರಣಾಧಿಕಾರಿಗಳಿಗೆ ಈಗಾಗಲೇ ಕಸಾಪ ತಿಳಿಸಿದೆ. ಈ ನಡುವೆ ಇದೇ ದೂರುಗಳ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುವಂತೆ ಕನ್ನಡ ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಆರ್.ರಮೇಶ್ ಆದೇಶ ಮಾಡಿರುವುದು ನಿಯಮಬಾಹಿರ ಎಂದು ತಿಳಿಸಿದೆ.