ಜಿಲ್ಲೆ

ಕಸಾಪದಲ್ಲಿ ಹೊಸ ಶಕೆ ಪ್ರಾರಂಭಿಸಿದವರು ಜಿ. ನಾರಾಯಣ

ಪಂಕಜ ಕೆ.ಎಂ.

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಅಧ್ಯಕ್ಷರಾಗಿ ತ್ರೈವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳ ಮೂಲಕ ಪರಿಷತ್ತಿನ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆ ನೀಡುವ ಮೂಲಕ ಹೊಸ ಶಕೆ ಪ್ರಾರಂಭಿಸಿದವರು ದೇಶಹಳ್ಳಿ ಜಿ. ನಾರಾಯಣ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಬಣ್ಣಿಸಿದರು.

ದೇಶಹಳ್ಳಿ ಜಿ. ನಾರಾಯಣ ಅವರ 100ನೇ ಜನ್ಮದಿನದ ಅಂಗವಾಗಿ ಪರಿಷತ್ತಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಪರಿಷತ್ತಿನ ಅಧ್ಯಕ್ಷರಾಗಿ ಜಿ.ನಾರಾಯಣ ಅವರು ಕನ್ನಡ ನಾಡು ನುಡಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರು 1942ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದ್ದರು. 1957ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾಗಿ, 1964ರಲ್ಲಿ ಬೆಂಗಳೂರಿನ ಮೇಯರ್ ಆಗಿ ನಗರದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದ್ದಾರೆ. ಕನ್ನಡ ಪತ್ರಿಕಾ ಅಕಾಡೆಮಿ ಅಧ್ಯಕ್ಷರೂ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಅವರು ನಿರಂತರ ಕನ್ನಡ ಸೇವೆ ಮಾಡಿದ್ದಾರೆ. ಅವರೊಬ್ಬ ಮಹಾನ್ ಸಂಘಕರೂ ಆಗಿದ್ದರು ಎಂದು ಸ್ಮರಿಸಿದರು.

ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ ಮಾತನಾಡಿ, ಶ್ರೇಷ್ಠ ಸಂಘಟಕರೂ, ಸಾಮಾಜಿಕ ಕಾರ್ಯಕರ್ತರೂ ಆಗಿದ್ದ ಜಿ. ನಾರಾಯಣರು ಅವರು ಸಾಹಿತಿ, ವಿದ್ವಾಂಸರೂ ಹಾಗೂ ಪತ್ರಕರ್ತರು ಆಗಿದ್ದರು. ಪರಿಷತ್ತಿನ ಪ್ರಗತಿ ಕಾರ್ಯಗಳಿಗೆ ವಿನೂತನ ಯೋಜನೆಗಳನ್ನು ರೂಪಿಸಿದ್ದರು. 1975ನೇ ವರ್ಷವನ್ನು ಯುನೆಸ್ಕೊ ಅಂತರರಾಷ್ಟ್ರೀಯ ಮಹಿಳಾ ವರ್ಷವೆಂದು ಘೋಷಿಸಿದಾಗ, ಪರಿಷತ್ತಿನಲ್ಲಿ 200ಗೋಷ್ಠಿಗಳನ್ನು ನಡೆಸಿ, 25 ಮಹಿಳಾ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸಿ, ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸಿದ್ದರು ಎಂದು ಹೇಳಿದರು.

ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ. ಪಟೇಲ್ ಪಾಂಡು ಇತರರು ಇದ್ದರು.