ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 54 ವಿವಿಧ ದತ್ತಿ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಆಹ್ವಾನಿಸಿದೆ. 2024ರ ಜನವರಿ 1ರಿಂದ ಡಿಸೆಂಬರ್ 31ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳುಹಿಸಬಹುದಾಗಿದೆ. ಕಾದಂಬರಿ, ಕಥಾ ಸಂಕಲನ, ಅನುವಾದ, ಸಂಶೋಧನೆ, ಮಕ್ಕಳ ಸಾಹಿತ್ಯ, ವೈಚಾರಿಕ ಬರಹಗಳು, ವೈದ್ಯಕೀಯ ಸಾಹಿತ್ಯ, ಇತಿಹಾಸ, ಜಾನಪದ, ಮನೋವಿಜ್ಞಾನ, ಸಿನಿಮಾ ಸಾಹಿತ್ಯ ಸೇರಿ ವಿವಿಧ ಪ್ರಕಾರಗಳ ಸಾಹಿತ್ಯ ಕೃತಿಗಳನ್ನು ದತ್ತಿ ಪ್ರಶಸ್ತಿಗಳಿಗೆ ಪರಿಗಣಿಸಲಾಗುತ್ತದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ. ಪ್ರಶಸ್ತಿಗೆ ಪುಸ್ತಕ ಸಲ್ಲಿಸುವವರು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವವನ್ನು ಕಡ್ಡಾಯವಾಗಿ ಹೊಂದಿರಬೇಕು. ಇಲ್ಲವಾದಲ್ಲಿ ಸದಸ್ಯತ್ವ ಪಡೆದು, ಪುಸ್ತಕ ಕಳುಹಿಸಬಹುದು. ಪರಿಷತ್ತಿನ ಯಾವುದೇ ಪುಸ್ತಕ ಪ್ರಶಸ್ತಿ ಪುರಸ್ಕೃತರು ತಾವು ಪ್ರಶಸ್ತಿ ಪಡೆದ ವಿಭಾಗಕ್ಕೆ ಮೂರು ವರ್ಷ ಅರ್ಜಿ ಸಲ್ಲಿಸುವಂತಿಲ್ಲ. ಪ್ರತಿ ವಿಭಾಗಕ್ಕೂ ಪ್ರತ್ಯೇಕ ಮೂರು ಪುಸ್ತಕಗಳನ್ನು ಸಲ್ಲಿಸಬೇಕು ಎಂದು ಹೇಳಿದ್ದಾರೆ. ಪುಸ್ತಕಗಳ ಪ್ರತಿಗಳು ಯಾವ ದತ್ತಿಗೆ ಎನ್ನುವುದನ್ನು ಪುಸ್ತಕದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ಬರೆದು, ಆಗಸ್ಟ್ 20ರೊಳಗೆ ಕಳುಹಿಸಬೇಕು.