ಜಿಲ್ಲೆ

ಕಸಾಪ- ಸರ್ಕಾರ ಬಾಂಧ್ಯವದಲ್ಲಿ ಹುಳಿ ಹಿಂಡುವ ಕೆಲಸ: ಡಾ.ಮಹೇಶ ಜೋಶಿ ಕಿಡಿ

ಪಂಕಜ ಕೆ.ಎಂ.

ಬೆಂಗಳೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು ಮಾತ್ರವಲ್ಲದೆ ಇದರ ಬೆಳವಣಿಗೆಯಲ್ಲೂ ಮಹತ್ವ ಕೊಡುಗೆ ನೀಡಿದ್ದಾರೆ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದ್ದಾರೆ.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ 141ನೇ ಜಯಂತ್ಯುತ್ಸವ ಅಂಗವಾಗಿ ಪರಿಷತ್ತಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತನ್ನು ನಾಲ್ವಡಿಯವರು ‘ಸ್ವಾಯತ್ತ ಸಂಸ್ಥೆ’ ಎಂದು ಕರೆದಿದ್ದರು. ಆ ಹೇಳಿಕೆ ಇಂದು ಎಂದಿಗಿಂತಲೂ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪರಿಷತ್ತಿನ ನಿತ್ಯದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ಮಾಡುತ್ತ, ಕನ್ನಡಪರ ಚಟುವಟಿಕೆಗಳಿಗೆ ಅಡ್ಡಗಾಲನ್ನು ಹಾಕಿ, ಹಿಂಬಾಗಿಲಿನಿಂದ ಆಡಳಿತ ನಡೆಸಲು ಪ್ರಯತ್ನಿಸುತ್ತಿವೆ ಎಂದು ದೂರಿದರು.

ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ನಾಲ್ವಡಿ ಸ್ಪಷ್ಟವಾಗಿ ಹೇಳಿದ್ದರು. ಆದರೆ ಈ ಕಾಲದ ಪರಿಸ್ಥಿತಿ ತದ್ವಿರುದ್ಧವಾಗಿದೆ. ತಾವು ಹೇಳಿದವರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡದಿದ್ದರೆ ಪ್ರತಿಭಟಿಸುತ್ತೇವೆ ಎಂಬ ಬೆದರಿಕೆ ಒಡ್ಡುತ್ತಾರೆ. ತಮ್ಮ ಮಾತು ನಡೆಯದಿದ್ದರೆ ಅಪಪ್ರಚಾರ ನಡೆಸುತ್ತಾರೆ. ಪರಿಷತ್ತು ಹಾಗೂ ಸರ್ಕಾರದ ನಡುವಿನ ಬಾಂಧ್ಯವಕ್ಕೂ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹಂಪಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ.ಎನ್. ಚಿನ್ನಸ್ವಾಮಿ ಸೋಸಲೆ ಅವರು ನಾಲ್ವಡಿಯವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಾಜ್ಯ ಚುನಾವಣಾ ಆಯುಕ್ತ ನ್ಯಾಯಮೂರ್ತಿ ಜಿ.ಎಸ್. ಸಂಗ್ರೇಶಿ, ಹಿರಿಯ ವಕೀಲ ನಾಗಯ್ಯ, ದತ್ತಿದಾನಿ ಟಿ. ಕೃಷ್ಣರಾಜು ಮತ್ತು ಡಾ.ಎಂ.ಜಿ.ನಾಗರಾಜು, ಪರಿಷತ್ತು ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ ಇತರರಿದ್ದರು.

ಮುಖವಾಡ ಕಳಚಲಿದೆ...

ಪರಿಷತ್ತಿನ ನಿಬಂಧನೆ ತಿದ್ದುಪಡಿ ಸಂಪೂರ್ಣ ಅಂತರಿಕ ವಿಷಯವಾಗಿದ್ದು. ಇದಕ್ಕಾಗಿ ತಿದ್ದುಪಡಿ ಸಲಹಾ ಸಮಿತಿ ರಚನೆಯಾಗಿ ಕಾರ್ಯಕಾರಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ವಿಶೇಷ ಸರ್ವ ಸದಸ್ಯರ ಸಭೆಯಲ್ಲಿ ಅಂಗೀಕಾರವಾಗುವ ಪ್ರಕ್ರಿಯೆ ಸಂಪೂರ್ಣ ನಿಯಮಬದ್ಧವಾಗಿ ನಡೆದಿದೆ. ಆದರೂ ಕೆಲವರು ಆಕ್ಷೇಪಣೆ ಸೂಚಿಸುತ್ತಾರೆ. ಇದು ನಾಲ್ವಡಿಯವರ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಒಳಗೊಂಡ ಸಮಿತಿ, ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪರಿಷತ್ತಿನ ಅಜೀವ ಸದಸ್ಯರ ಮುಂದೆ ವಾಸ್ತವ ಅಂಶಗಳನ್ನು ತೆರೆದಿಟ್ಟು, ಪಟ್ಟಭದ್ರ ಹಿತಾಸಕ್ತಿಗಳ ಮುಖವಾಡ ಕಳಚಲಿದೆ ಎಂದು ಮಹೇಶ ಜೋಶಿ ಹೇಳಿದರು.

ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ ಪಿ.ಎಸ್. ಚಿನ್ಮಯಿ, ಡಿ. ಗಂಗಶ್ರೀ, ಲಿಖಿತಾ, ಎಸ್. ಸುಶೀಲಾ ಅವರಿಗೆ ಶ್ರೀಮತಿ ಮಹಾಲಕ್ಷ್ಮಿ ಟಿ.ಕೃಷ್ಣರಾಜು ನೆನಪಿನ ದತ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ವೇಳೆ ವಿ. ಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಬಂದಿ ಸೇವಾ ಪ್ರಶಸ್ತಿಯನ್ನು ಎಂ.ಟಿ. ತಿಮ್ಮಪ್ಪ ಅವರಿಗೆ ಹಾಗೂ ಎಸ್. ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಪ್ರಶಸ್ತಿಯನ್ನು ಜಿ. ಸೀತಾರಾಮು ಅವರಿಗೆ ಪ್ರದಾನ ಮಾಡಲಾಯಿತು.