ಬೆಂಗಳೂರು: ಸಾಹಿತಿ ನಾಡೋಜ ಡಾ. ಹಂಪ ನಾಗರಾಜಯ್ಯ ಅವರ ನೇತೃತ್ವದ ನಿಯೋಗ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕುರಿತು ಸಲ್ಲಿಸಿರುವ ಮನವಿ ಪತ್ರ ಆಧಾರ ರಹಿತವಾದುದು. ಹೀಗಾಗಿ ಅದನ್ನು ತಿರಸ್ಕರಿಸಬೇಕು ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರು ಮುಖ್ಯಮಂತ್ರಿ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
ಹಂಪನಾ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ (1978ರಿಂದ 1986ರವರೆಗೆ) ಅವಧಿಯಲ್ಲಿ ಅಧಿಕಾರ ದುರುಪಯೋಗ ಮಾಡಿದ್ದಾರೆ. ಸ್ವಜನ ಪಕ್ಷಪಾತ ಮತ್ತು 1986ರ ಚುನಾವಣೆಯಲ್ಲಿ ಅವರು ನಡೆಸಿದ ಅಕ್ರಮಗಳ ಕುರಿತು ಕರ್ನಾಟಕ ಸರಕಾರವು ನ್ಯಾ. ಪಿ.ಕೆ. ಶ್ಯಾಮಸುಂದರ ಅಯೋಗ ನೇಮಿಸುತ್ತು. ಪರಿಶೀಲನೆ ನಡೆಸಿದ ಆಯೋಗ ನೀಡಿದ ವರದಿಯನ್ನು ವಿಧಾನ ಸಭೆಯ ಎರಡೂ ಸಭೆಗಳಲ್ಲಿ ಚರ್ಚಿಸಿ ಅಂಗೀಕರಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಿತ್ತು. ಇಂತಹ ಹಿನ್ನೆಲೆಯ ವ್ಯಕ್ತಿ ಈಗ ಪರಿಷತ್ತಿನ ಆಡಳಿತದ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸಕರ ಎಂದು ಡಾ. ಮಹೇಶ ಜೋಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಚುನಾಯಿತ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯನ್ನು ಹೊಂದಿದ್ದು ಸ್ವತಂತ್ರ ಸ್ವಾಯತ್ತ, ರಾಜಕೀಯ ತಟಸ್ಥ ಸಂಸ್ಥೆಯಾಗಿದೆ.ಇದರ ಮೇಲೆ ಸಮಾನ ಮನಸ್ಕರ ಹೆಸರಿನ ವೇದಿಕೆಯಿಂದ ಕೂಡ ಪಿತೂರಿ ನಡೆದಿತ್ತು. ಆಗ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅದರ ಅಧ್ಯಕ್ಷರ ವಿರುದ್ದ ಅವಹೇಳನಾಕಾರಿ ಮಾತಗಳನ್ನಾಡದಂತೆ ಪ್ರತಿಬಂಧಕಾಜ್ಞೆ ಇದೆ. ಈ ಪ್ರತಿಭಟನೆಯ ಸಂದರ್ಭದಲ್ಲಿಯೇ ಸಿ.ಕೆ.ರಾಮೇಗೌಡ, ಶಂಕರ್ ಹೂಗಾರ್, ಸಿ.ಕೆ. ದಾಸಪ್ಪ ಅವರು ತಪ್ಪೊಪ್ಪಿಗೆ ಮೇಲೆ ನ್ಯಾಯಾಲಯವು ದಂಡ ಅಥವಾ ತಪ್ಪಿದರೆ ಸೆರೆವಾಸದ ಶಿಕ್ಷೆ ವಿಧಿಸಿರುತ್ತದೆ. ಇಂತಹ ಹಿನ್ನೆಲೆ ಇರುವವರು ಮಾಡಿರುವ ಸುಳ್ಳು ಆರೋಪದ ಮನವಿಯನ್ನು ತಿರಸ್ಕರಿಸಬೇಕೆಂದು ಮುಖ್ಯಮಂತ್ರಿಗಳನ್ನು ವಿನಂತಿಸಿಕೊಂಡಿದ್ದಾರೆ.