ಜಿಲ್ಲೆ

ಹೆಣ್ಣಿನ ಅಂತರಂಗ ಬಿಂಬಿಸಿದ ಲೇಖಕಿ ತ್ರಿವೇಣಿ : ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ

ಪಂಕಜ ಕೆ.ಎಂ.

ಬೆಂಗಳೂರು: ಹೆಣ್ಣಿನ ಅಂತರಂಗವನ್ನು ಬರಹದಲ್ಲಿ ಮನೋವೈಜ್ಞಾನಿಕವಾಗಿ ಬಿಂಬಿಸಿದ ಕಾದಂಬರಿಗಾರ್ತಿ ತ್ರಿವೇಣಿ ಅವರು, ತಮ್ಮ ಕೃತಿಗಳ ಮೂಲಕ ಹೊಸ ಓದುಗರನ್ನು ಸೃಷ್ಟಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಸಂಚಲನ ಮೂಡಿಸಿದ ಅನನ್ಯ ಸಾಧಕಿ ಎಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದ್ದಾರೆ.

ತ್ರಿವೇಣಿ 95ನೇ ಜನ್ಮದಿನಾಚರಣೆಯ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ತ್ರಿವೇಣಿಯವರ ‘ಹಣ್ಣೆಲೆ ಚಿಗುರಿದಾಗ’, ‘ಬೆಳ್ಳಿಮೋಡ’, ‘ಶರಪಂಜರ’, ‘ಮುಕ್ತಿ’, ‘ಹೂವು ಹಣ್ಣು’ ಕಾದಂಬರಿಗಳು ಚಲನಚಿತ್ರಗಳಾಗಿ ಶ್ರೀಸಾಮಾನ್ಯರನ್ನು ತಲುಪಿವೆ. ಸೀಪರ ಧೋರಣೆ, ಸಂಬಂಧಗಳ ಸೂಕ್ಷ್ಮತೆಯನ್ನು ಅವರು ಕಟ್ಟಿಕೊಟ್ಟಿರುವ ರೀತಿ ಈ ಕಾಲದ ಲೇಖಕಿಯರಿಗೆ ಮಾದರಿಯಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು, ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಪ್ರೊ.ಎನ್.ಎಸ್. ಶ್ರೀಧರಮೂರ್ತಿ ಮಾತನಾಡಿ, ಸಣ್ಣಕಥೆಗಳ ಮೂಲಕ ಕನ್ನಡ ಸಾಹಿತ್ಯ ರಂಗವನ್ನು ಪ್ರವೇಶಿಸಿದ ತ್ರಿವೇಣಿ ಅವರು, ಹೆಣ್ಣಿನ ಮನದಾಳವನ್ನು ಸೂಕ್ಷ್ಮವಾಗಿ ಹಾಗೂ ಮುಗ್ಧಯುವತಿಯ ಮನಸ್ಸನ್ನು ನೆಲೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿವೆ ಎಂದರು.

ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ. ಪಟೇಲ್ ಪಾಂಡು ಇತರರಿದ್ದರು.