ಜಿಲ್ಲೆ

ವಿಶ್ವ ಭಾಷೆಯ ಸಾಲಿನಲ್ಲಿ ಗುರುತಿಸಿಕೊಂಡಿರುವ ಕನ್ನಡ

ಪ್ರಸಿನ್ ಕೆ.ಆರ್

ಹಾಸನ: ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದ್ದು, ಸಮೃದ್ಧವಾಗಿ ಬೆಳೆದು ಇಡೀ ವಿಶ್ವದ ಭಾಷೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಹೇಳಿದರು.

ನಗರದ ಮಾಸ್ಟರ್ಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡದ ಬೆಳವಣಿಗೆಗೆ ಜನಪದರು, ಕವಿಗಳು, ರಾಜರ ಆಶ್ರಯಗಳು, ಸಂಗೀತಗಾರರು, ವಚನಕಾರರ ಕೊಡುಗೆ ಸಾಕಷ್ಟು ಇದೆ. ಇವರೆಲ್ಲರ ಶ್ರಮದಿಂದ ಅಳಿಸಲಾಗದ ಭಾಷೆಯಾಗಿ ಬೆಳೆದಿದೆ. ಕನ್ನಡಕ್ಕೆ 57 ವರ್ಣಮಾಲೆಗಳಿವೆ. ಮಹಾ ಕಾವ್ಯಗಳಿವೆ, ಕವಿಗಳು, ಸಂತರು, ಸಂಗೀತಗಾರರು, ವಚನಕಾರರು ಭಾಷೆಗಾಗಿ ದುಡಿದಿದ್ದಾರೆ. ಇಂತಹ ಸಂಪತ್ಭರಿತ ಭಾಷೆಯನ್ನು ನಮ್ಮ ಮುಂದಿನ ಜನಾಂಗ ಬೆಳಸಿಕೊಂಡು ಹೋಗಬೇಕು ಎಂದರು. ವಿದ್ಯಾರ್ಥಿಗಳು ಭರತನಾಟ್ಯ, ನಾಡಗೀತೆ, ಭಾವಗೀತೆಗಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಮಾಸ್ಟರ್ಸ್‌ ಪದವಿ ಪೂರ್ವ ಕಾಲೇಜಿನಲ್ಲಿ 2023-24, 2024-25ನೇ ಸಾಲಿನಲ್ಲಿ ಬೋರ್ಡ್ ಪರೀಕ್ಷೆ, ನೀಟ್, ಜೆಇಇ, ಸಿಇಟಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿದ 10 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಗದು ಬಹುಮಾನ ನೀಡಲಾಯಿತು.

ಬಿ.ಎಸ್ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಸ್ಟರ್ಸ್‌ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಎ. ಹನುಮಂತರಾಯುಡು, ಉಪಾಧ್ಯಕ್ಷರಾ ಎಚ್.ಸಿ. ನಂದಿನಿ, ಕಾರ್ಯದರ್ಶಿ ಗೌಡೇಗೌಡ, ಖಜಾಂಚಿ ಹಾಗೂ ಪ್ರಾಂಶುಪಾಲ ಮಂಜುನಾಥ್, ಆಶಾ, ಸಣ್ಣ ನಂಜೇಗೌಡ, ಎನ್.ಬಿ.ನಾಗರತ್ನ ಇತರರಿದ್ದರು.