ಮೈಸೂರು: ಜಗತ್ತಿನ ಪ್ರಾಚೀನ ಭಾಷೆಗಳಲ್ಲೊಂದಾದ ಸುಮಾರು ಮೂರು ಸಾವಿರ ವರ್ಷಗಳ ಸುದೀರ್ಘ ಚರಿತ್ರೆಯುಳ್ಳ ನಮ್ಮ ಕನ್ನಡ ಭಾಷೆಯಲ್ಲಿ ಏನಿಲ್ಲ ಎನ್ನುವಂತಿಲ್ಲ. ಇಲ್ಲಿ ಎಲ್ಲವೂ ಇದ್ದು, ಬಯಸಿದ್ದೆಲ್ಲವನ್ನೂ, ಕೇಳಿದ್ದೆಲ್ಲವನ್ನೂ ಕೊಡುವಂತಹ ಕಾಮಧೇನು ಕನ್ನಡ ಭಾಷೆ ಎಮದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಚಾಮುಂಡಿಪುರಂನ ಸೆಂಟ್ ಮೇರಿಸ್ ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ವತಿಯಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ತನ್ನ ಮುದ್ದು ಮುದ್ದಾದ ಸುಂದರ ಅಕ್ಷರಗಳಿಂದ ಲಿಪಿಗಳ ರಾಣಿ ಎಂದು ಕರೆಸಿಕೊಳ್ಳುವ ಕನ್ನಡ ಭಾಷೆ ಕಲಿಯುವವರಿಗೆ ಅತ್ಯಂತ ಸುಲಭವಾಗಿದ್ದು ಕನ್ನಡೇತರರೂ ಕೂಡ ಬಹುಬೇಗ ಕನ್ನಡವನ್ನು ಕಲಿಯಬಹುದು ಎಂದರು.
ನಮ್ಮ ಕನ್ನಡ ನಾಡು ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಜಾನಪದ, ವಿಜ್ಞಾನ, ಧಾರ್ಮಿಕ, ಕೃಷಿ, ಕ್ರೀಡೆ, ರಾಜಕೀಯ, ವೈದ್ಯಕೀಯ, ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಸಂಖ್ಯಾತ ಸಾಧಕರನ್ನು ಸೃಷ್ಟಿಸಿದೆ. ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು ಇದರ ಮೂಲಕ ಏನು ಬೇಕಾದರೂ ಸಾಧಿಸ ಬಹುದೆಂಬುದನ್ನು ಕನ್ನಡದ ಸಾಧಕ ಮಹನೀಯರು, ಪ್ರತಿಭಾ ಸಂಪನ್ನರು ಈಗಾಗಲೇ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಆಂತೋನಿ ಮೇರಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ತೆರೆಸಾ ವರ್ಗೀಸ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸ್ಟೆಲ್ಲಾ ಮೇರಿ, ಶಿಕ್ಷಕಿಯರಾದ ಶಶಿಕಲಾ, ಶೃತಿ, ಎ.ದೀಪಕ್ ಹಾಗೂ ಇತರರು ಇದ್ದರು.