ಮಂಡ್ಯ: ರಾಜ್ಯದಲ್ಲಿಯೇ ಅತಿ ಹೆಚ್ಚು ಕನ್ನಡ ಭಾಷೆಯನ್ನು ಮಂಡ್ಯ ಜಿಲ್ಲೆಯಲ್ಲಿ ಮಾತನಾಡುತ್ತಾರೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಸಿ.ತಮ್ಮೇಗೌಡ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು(ಕಲ್ಲುಕಟ್ಟಡ) ಪದವಿ ಪೂರ್ವ ಕಾಲೇಜಿನ ಕುವೆಂಪು ರಂಗಮಂಟಪದ ಆವರಣದಲ್ಲಿ ಕನ್ನಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕವಿ ಕಾವ್ಯ ಕಮಟ ಮಾಲಿಕೆ, ಹಳಗನ್ನಡ ಸಾಹಿತ್ಯ ಉಪನ್ಯಾಸ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1951 ನ.1ರಂದು ಭಾಷೆಗಳ ಆಧಾರದ ಮೇಲೆ ರಾಜ್ಯ ವಿಂಗಡಣೆ ಮಾಡಲಾಯಿತು. ಅದನ್ನು ರಾಜ್ಯೋತ್ಸವವಾಗಿ ಆಚರಿಸಲಾಗುತ್ತಿದೆ. ಇಡೀ ದೇಶದಲ್ಲಿ ಹಲವು ಭಾಷಾವಾರು ರಾಜ್ಯಗಳು ವಿಂಗಡಣೆಯಾದವು. ಆಯಾ ಭಾಷೆಯ ಆಡಳಿತದಲ್ಲಿಯೇ ಇದ್ದರೆ ಅಭಿವೃದ್ಧಿ ಹೊಂದುತ್ತದೆ. ಮದ್ರಾಸ್, ಮುಂಬೈ, ಮೈಸೂರು ಮಹಾರಾಜರ ಕಾಲದಲ್ಲಿ ವಿಂಗಡಣೆಯಾಗಿದ್ದ ಭಾಷಾವಾರು ರಾಜ್ಯಗಳಿಗೆ ಒತ್ತು ನೀಡಲೆಂದು ಹೋರಾಟಗಾರರ ಒತ್ತಡದಿಂದ ಆಯಾ ರಾಜ್ಯಗಳು ವಿಂಗಣೆಯಾದವು. ಅದರಲ್ಲಿ ನಮ್ಮ ಮೈಸೂರು ರಾಜ್ಯ 30 ಜಿಲ್ಲೆಯನ್ನು ಹೊಂದಿತ್ತು. ತದನಂತರ 31 ಜಿಲ್ಲೆಗಳಾಗಿ ಕರ್ನಾಟಕ ರಾಜ್ಯವಾಗಿ ಮರುನಾಮಕರಣವಾಯಿತು. ಈ ಹಿಂದೆ ಇದ್ದ ಆಡಳಿತಕ್ಕೂ ಈಗಿರುವ ಆಡಳಿತಕ್ಕೂ ಬಾರಿ ವ್ಯತ್ಯಾಸವಿದೆ ಎಂದು ತಿಳಿಸಿದರು.
ಹಳೆಗನ್ನಡ ಸಾಹಿತ್ಯದ ಬಗ್ಗೆ ಸರ್ಕಾರಿ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ ಲೋಕೇಶ್ ಕೆರಗೋಡು ಉಪನ್ಯಾಸ ನೀಡಿದರು. ಕಸಾಪ ಅಧ್ಯಕ್ಷ ಚಂದ್ರುಲಿಂಗು, ಗೌರವ ಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಕೋಶಾಧ್ಯಕ್ಷ ಅಪ್ಪಾಜಪ್ಪ, ಕಾರ್ಯದರ್ಶಿ ತಿಮ್ಮಯ್ಯ, ನಗರ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ, ನಿರ್ದೇಶಕಿ ಎಚ್.ಸಿ.ಲಕ್ಷ್ಮೀ ಇತರರಿದ್ದರು. ಇದೇ ಸಂದರ್ಭದಲ್ಲಿ ಗಾಯಕ ಗೊರವಾಲೆ ಚಂದ್ರಶೇಖರ್ ತಂಡ ಸುಗಮ ಸಂಗೀತ ನಡೆಸಿಕೊಟ್ಟಿತು.