ಮಂಡ್ಯ: ಕರೊನಾ ವೈರಸ್ ಹಾವಳಿಯ ನಡುವೆಯೂ ಭಾನುವಾರ ಜಿಲ್ಲಾದ್ಯಂತ ನಾಡಹಬ್ಬ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಕೆಆರ್‌ಎಸ್ ಅಣೆಕಟ್ಟೆ ಪುನಶ್ಚೇತನಗೊಳಿಸಲು 58.46 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಅದು ಶೀಘ್ರದಲ್ಲಿ ಮುಗಿಯಲಿದೆ. ವಿಶ್ವೇಶ್ವರಯ್ಯ ನಾಲೆಯ ಜಾಲದ 2ನೇ ಹಂತದ 46.25 ಕಿ.ಮೀವರೆಗಿನ ಆಧುನೀಕರಣ ಕಾಮಗಾರಿ 330.48 ಕೋಟಿ ರೂ. ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ, ಜಿಲ್ಲೆಯ ವಿವಿಧ ತಾಲೂಕಿನಲ್ಲಿರುವ ಪ್ರವಾಸಿ ತಾಣಗಳ ಅಭಿವೃದ್ಧಿಗೆ 13.19 ಕೋಟಿ ರೂ. ವೆಚ್ಚದಲ್ಲಿ 15 ಕಾಮಗಾರಿ ಮಂಜೂರಾಗಿದೆ ಎಂದರು.
ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ತಾಪಂ ಅಧ್ಯಕ್ಷೆ ಎಚ್.ಎಸ್.ಶಿವಕುಮಾರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಪಂ ಸಿಇಒ ಎಸ್.ಎಂ.ಜುಲ್‌ಫಿಖಾರ್ ಉಲ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಎಎಸ್ಪಿ ಧನಂಜಯ, ನಗರಸಭೆ ಸದಸ್ಯ ಶ್ರೀಧರ್ ಇತರರಿದ್ದರು.