ಎಚ್.ಡಿ.ಕೋಟೆ: ಸರಗೂರು ಮತ್ತು ಎಚ್.ಡಿ. ಕೋಟೆ ತಾಲೂಕಿನಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಮಹಾತ್ಮ ಗಾಂಧಿ ಸಭಾ ಭವನದಲ್ಲಿ ಇತ್ತೀಚೆಗೆ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿನ ಕಾರು ಚಾಲಕರು, ಆಟೋ ಚಾಲಕ, ವರ್ತಕರ ಸಂಘ ಹಾಗೂ ಇತ್ಯಾದಿ ಸಂಘ ಸಂಸ್ಥೆಗಳ ಸದಸ್ಯರೊಂದಿಗೆ ಮತ್ತೊಂದು ಸಭೆ ಕರೆದು ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗುವುದು. ಅಲ್ಲದೆ ಸ್ತಬ್ಧಚಿತ್ರ ನಿರ್ಮಿಸಿ ಭಾಗವಹಿಸಲು ಸಹ ಸೂಚಿಸಲಾಗುವುದು ಎಂದರು.
ಸರಗೂರು ಪಟ್ಟಣದಲ್ಲಿನ ಮೈದಾನ ಮತ್ತು ಎಚ್.ಡಿ.ಕೋಟೆ ಪಟ್ಟಣದಲ್ಲಿ ಹಳೇ ಆಸ್ಪತ್ರೆ ಆವರಣದಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಗುವುದು. ಕನ್ನಡದಲ್ಲಿ ನಾಮಫಲಕ ಇಲ್ಲದ ಅಂಗಡಿಗಳಿಗೆ ರಾಜ್ಯೋತ್ಸವದಂದು ತೆರಳಿ ಅವರಿಗೆ ಜಾಗೃತಿ ಮೂಡಿಸಿ ಅವರನ್ನು ಸನ್ಮಾನಿಸುವುದರ ಮೂಲಕ ಕನ್ನಡ ನಾಮಫಲಕ ಅಳವಡಿಸುವಂತೆ ಸೂಚಿಸಲಾಗುವುದು ಎಂದರು.
ಅಲ್ಲದೆ ರಾಜ್ಯೋತ್ಸವದಂದು ವರ್ತಕರು ತಮ್ಮ ಅಂಗಡಿಗಳಲ್ಲಿ ಕನ್ನಡ ಬಾವುಟಗಳನ್ನು ಹಾರಿಸಬೇಕು. ಜತೆಗೆ ಅರ್ಥಗರ್ಭಿತವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ವರ್ತಕರಿಗೆ ಬಹುಮಾನ ನೀಡಲಾಗುವುದು, ಪ್ರಥಮ ಬಹುಮಾನ 10 ಸಾವಿರ ರೂ., ದ್ವಿತೀಯ ಬಹುಮಾನ 5 ಸಾವಿರ ರೂ. ಹಾಗೂ ತೃತೀಯ ಬಹುಮಾನ 3 ಸಾವಿರ ರೂ. ನೀಡಲಾಗುವುದು. ಈ ಬಾರಿ ವಿಶೇಷವಾಗಿ ರಾಜ್ಯೋತ್ಸವಕ್ಕೆ ಆನೆಯನ್ನು ಕರೆಸಲು ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಪ್ರಯತ್ನಿಸಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್ ಮಾತನಾಡಿ, ತಾಲೂಕು ಕೇರಳ ಗಡಿ ಭಾಗದಲ್ಲಿ ಇರುವುದರಿಂದ ಕೇರಳದಿಂದ ಜೀವನೋಪಾಯಕ್ಕೆ ತಾಲೂಕಿನಲ್ಲಿ ಅಂಗಡಿ -ಮುಂಗಟ್ಟುಗಳನ್ನು ತೆರದಿದ್ದು ನಾಮಫಲಕಗಳನ್ನು ಸಂಪೂರ್ಣವಾಗಿ ಮಲಯಾಳಂನಲ್ಲಿ ಅಳವಡಿಸಿದ್ದಾರೆ. ಅಂತಹ ಅಂಗಡಿಗಳಿಗೆ ತೆರಳಿ ಕನ್ನಡದ ಜಾಗೃತಿ ಮೂಡಿಸುವುದರ ಜತೆಗೆ ನಾಮಫಲಕಗಳನ್ನು ಕನ್ನಡಮಯ ಮಾಡಬೇಕು ಎಂದು ಕೋರಿದರು.
ಅಲ್ಲದೇ ರಾಜ್ಯೋತ್ಸವದಂದು ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಾಡು, ನುಡಿಗೆ ಗೌರವ ಸಲ್ಲಿಸುವಂತಹ ಸ್ತಬ್ಧಚಿತ್ರಗಳನ್ನು ನಿರ್ಮಿಸಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಮಾಡಲು ತಹಸೀಲ್ದಾರ್‌ಗೆ ಮನವಿ ಮಾಡಿದರು.
ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ತಾಲೂಕು ಆಡಳಿತದಿಂದ ಎಲ್ಲ ಇಲಾಖೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಸಂದೇಶ ಸಾರುವ ರೀತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಅಲ್ಲದೆ ಈ ಬಾರಿ ಐದು ಮಂದಿ ಸಾಧಕರನ್ನು ಗುರುತಿಸಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸರಗೂರು ತಹಸೀಲ್ದಾರ್ ಮೋಹನ್ ಕುಮಾರಿ, ಕೋಟೆ ಸರಗೂರು ಇನ್‌ಸ್ಪೆಕ್ಟರ್‌ಗಳಾದ ಗಂಗಾಧರ್, ಕಿರಣ್, ಕೋಟೆ, ಸರಗೂರು ಇಒಗಳಾದ ಧರಣೇಶ್, ಪ್ರೇಮ್ ಕುಮಾರ್, ಮುಖಂಡರಾದ ಕೆಂಡಗಣ್ಣೆಗೌಡ, ಜಿವಿಕ ಬಸವರಾಜ್, ಸ್ಟುಡಿಯೋ ಪ್ರಕಾಶ್, ಚೌಡಳ್ಳಿ ಜವರಯ್ಯ, ಕ್ರಾಂತಿ ಕುಮಾರ್, ಪ್ರಕಾಶ್ ಬುದ್ಧ, ಉಮೇಶ್, ಅಶೋಕ್, ನಾಗರಾಜು, ಮಾದೇವನಾಯಕ, ಚಾಮರಾಜು, ಚನ್ಮ, ಶೈಲಸುದಮಣಿ, ಅನುಶ, ಅಧಿಕಾರಿಗಳಾದ ಬಿಇಒ ರಾಜು, ಪರಿಶಿಷ್ಟ ಕಲ್ಯಾಣ ವರ್ಗಗಳ ಅಧಿಕಾರಿ ಮಹೇಶ್, ವೈ.ಡಿ.ರಾಜಣ್ಣ, ಸಂತೋಷ್ ಕುಮಾರ್, ಶಶಿಕಲಾ, ರಮೇಶ್, ನೇತ್ರಾವತಿ, ಎಇಇ ಗಣೇಶ್, ಗೋವಿಂದನಾಯಕ, ಚಂದುಕುಮಾರ್, ವಸಂತ್, ನಟಶೇಖರ್, ಎಂ.ಜಿ.ಸೋಮಣ್ಣ ಇದ್ದರು.