ಮಂಡ್ಯ: ರಾಜ್ಯದಲ್ಲಿಯೇ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಕರ್ನಾಟಕ ಸಂಘದಿಂದ ಇದೇ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 25 ಜನರಿಗೆ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಜಿಲ್ಲಾಮಟ್ಟದ ಪ್ರಶಸ್ತಿ ನೀಡಲಾಗುತ್ತಿದೆ. ಆದರೆ ತಲಾ 15 ಸಾವಿರ ರೂ ನಗದಿನ ಜತೆಗೆ ಪುರಸ್ಕಾರ ನೀಡುತ್ತಿರುವ ಬೆರಳೆಣಿಕೆಯಷ್ಟು ಸಂಸ್ಥೆಗಳ ಸಾಲಿಗೆ ಕರ್ನಾಟಕ ಸಂಘವೂ ಸೇರಿಕೊಂಡಂತಾಗಿದೆ. ಈಗಾಗಲೇ ಹತ್ತಾರೂ ದತ್ತಿ ಹಾಗೂ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ನೀಡುತ್ತಿರುವುದರ ಜತೆಗೆ ಕಲೆ, ಸಾಹಿತ್ಯದ ವಿಷಯದಲ್ಲಿ ವರ್ಷಪೂರ್ತಿ ನಿರಂತರ ಕಾರ್ಯಕ್ರಮ ಆಯೋಜಿಸುತ್ತಿರುವ ಹೆಗ್ಗಳಿಕೆ ಹೊಂದಿರುವ ಸಂಘ, ಇದೀಗ ಹೊಸ ಕಲ್ಪನೆಯೊಂದಿಗೆ ರಾಜ್ಯದಲ್ಲಿಯೇ ಮಾದರಿ ಎನ್ನಿಸಿಕೊಂಡಿದೆ.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಈ ವರ್ಷದಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗದು ಸಹಿತ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. 25 ಜನರಿಗೆ ಪ್ರದಾನ ಮಾಡುವ ನಗದನ್ನು ದಾನಿಗಳು ತಮ್ಮ ಹಿರಿಯರ ಹೆಸರಿನಲ್ಲಿ ಕೊಡುತ್ತಿದ್ದಾರೆ. ಸಾಂಸ್ಕೃತಿಕ ರಂಗದಲ್ಲಿ ಇದೊಂದು ಮೈಲಿಗಲ್ಲಾಗಿದೆ. ಈ ಬಾರಿ ಆಯ್ದ ಕೆಲ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದ್ದು, ಮುಂದಿನ ವರ್ಷದಲ್ಲಿ ಎಲ್ಲ ಕ್ಷೇತ್ರದವರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ನ.26ರಂದು ಬೆಳಗ್ಗೆ 11ಗಂಟೆಗೆ ನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.
ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರವಿಕುಮಾರ್ ಗಣಿಗ ವಹಿಸಲಿದ್ದು, ಮಾಜಿ ಎಂಎಲ್‌ಸಿ ಬಿ.ರಾಮಕೃಷ್ಣ ಉದ್ಘಾಟನೆ ಮಾಡಲಿದ್ದಾರೆ. ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ರಾಜ್ಯೋತ್ಸವ ಕುರಿತು ಮಾತನಾಡಲಿದ್ದು, ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪುರಸ್ಕೃತ ಕೆ.ಟಿ.ಚಂದು ಅವರನ್ನು ಮಾಜಿ ಶಾಸಕ ಎಂ.ಶ್ರೀನಿವಾಸ್ ಅಭಿನಂದಿಸಲಿದ್ದಾರೆ. ಹ.ಕ.ರಾಜೇಗೌಡ ಸಂಶೋಧನಾ ಕೇಂದ್ರವನ್ನು ಜಲಸಾರಿಗೆ ಮಂಡಳಿ ಸಿಇಒ ಜಯರಾಂ ರಾಯಪುರ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಭಾಗವಹಿಸಲಿದ್ದಾರೆಂದು ಹೇಳಿದರು.
ಸಂಘದ ಲೋಕೇಶ್ ಚಂದಗಾಲು, ಎಂ.ಕೆ.ಹರೀಶ್‌ಕುಮಾರ್, ಎಚ್.ಡಿ.ಸೋಮಶೇಖರ್, ನಾಗಪ್ಪ ಹನಕೆರೆ ಇದ್ದರು.
ಪ್ರಶಸ್ತಿ ಪುರಸ್ಕೃತರು
ಸಿ.ಎಸ್.ರಾಮಕೃಷ್ಣ(ಹವ್ಯಾಸಿ ರಂಗಭೂಮಿ), ರತ್ನಾ ಜೈನ್(ಹವ್ಯಾಸಿ ರಂಗಭೂಮಿ), ಬಿ.ಪುಟ್ಟಬುದ್ದಿ(ಹವ್ಯಾಸಿ ರಂಗಭೂಮಿ), ಹುರುಗಲವಾಡಿ ರಾಮಯ್ಯ(ಜಾನಪದ ಗಾಯಕ), ಡಾ.ಪಿ.ಮಾನಸಾ(ಭರತನಾಟ್ಯ), ಡಿ.ಎನ್.ವೆಂಕಟೇಶ್(ಚಿತ್ರ ಕಲಾವಿದ), ಯೋಗೇಶ್(ಪತ್ರಿಕೋದ್ಯಮ), ಗಾಮನಹಳ್ಳಿ ಸ್ವಾಮಿ(ಸುಗಮ ಸಂಗೀತ), ಚನ್ನಪ್ಪಚಾರ್(ಯಕ್ಷಗಾನ), ಮಂಜುಳಾ(ರಂಗಭೂಮಿ), ಎಂ.ಕೆ.ಶೇಖರ್(ಡೋಲುವಾದನ), ಎಂ.ಎನ್.ಪಿ.ರತ್ನಂ(ಸ್ಯಾಕ್ಸೋಫೋನ್), ವೈ.ಎಂ.ಹನುಮಂತು(ಸುಗಮ ಸಂಗೀತ), ಎಂ.ಟಿ.ವೆಂಕಟೇಶ್(ಹಳ್ಳಿಕಾರ್ ತಳಿ ಪಾಲಕ), ಡೇವಿಡ್(ಸಂಗೀತ ಸಂಯೋಜನೆ), ಗಿರೀಶ್(ರಂಗಭೂಮಿ), ಹೊನ್ನಯ್ಯ(ಕೋಲಾಟ), ರಾಧಿಕಾರಾವ್(ಕರ್ನಾಟಕ ಶಾಸ್ತ್ರೀಯ ಸಂಗೀತ), ಜಯಶಂಕರ್(ಪರಿಸರ), ಎ.ಎಚ್.ಚನ್ನೇಗೌಡ(ರಂಗಭೂಮಿ), ಎನ್.ಎಸ್.ಮಣಿ(ಕೊಳಲುವಾದನ), ಸಿದ್ದೇಗೌಡ(ಪೂಜಾಕುಣಿತ), ಸಿ.ಎನ್.ಮಂಜೇಶ್(ಜಾನಪದ ಸಂಘಟಕ), ಗುರುಮೂರ್ತಿ(ರಂಗ ಸಂಗೀತ) ಮತ್ತು ಶ್ರೀಧರ್(ಗಾಯಕ).