ಜಿಲ್ಲೆ

ಟೆಲಿಕಾಂ ತರಬೇತಿ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ

ಆರ್.ಕೃಷ್ಣ

ಮೈಸೂರು: ನಗರದ ಟಿ.ಕೆ.ಬಡಾವಣೆಯಲ್ಲಿರುವ ಬಿಎಸ್‌ಎನ್‌ಎಲ್ ವಲಯ ಟೆಲಿಕಾಂ ತರಬೇತಿ ಕೇಂದ್ರದಲ್ಲಿ ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ನಟನಾ ರಂಗಶಾಲೆ ಪ್ರಾಂಶುಪಾಲ ಮೇಘಾ ಸಮಿರಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆಯ ವೈಭವ, ಭಾಷೆಯ ಬೆಳವಣಿಗೆ, ಬಳಕೆ ಕುರಿತು ಮಾತನಾಡಿದರು. ನಗರ ಅಪರಾಧ ಪತ್ತೆ ದಳ (ಸಿಸಿಬಿ) ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಸ್.ಎನ್. ಸಂದೇಶ್‌ಕುಮಾರ್ ಮಾತನಾಡಿದರು.

ಬಿಎಸ್‌ಎನ್‌ಎಲ್ ಪ್ರಧಾನ ವ್ಯವಸ್ಥಾಪಕ ರಾಜೇಂದ್ರ ಕುಮಾರ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಧಾನ ವ್ಯವಸ್ಥಾಪಕ ಎಂ.ರವಿಶಂಕರ್, ಅನ್ನಪೂರ್ಣ ಜಗನ್ನಾಥ್ ಇತರರು ಇದ್ದರು.

ಬಿಎಸ್‌ಎನ್‌ಎಲ್ ಸಿಬ್ಬಂದಿ, ಫ್ರಾಂಚೈಸಿಗಳು ಮತ್ತು ಅವರ ಕುಟುಂಬದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಲ್ಲದೇ ಇದೇ ವೇಳೆ ಬಿಎಸ್‌ಎನ್‌ಎಲ್ ಸಿಬ್ಬಂದಿ ಮತ್ತು ಫ್ರಾಂಚೈಸಿಗಳಿಗೆ ನಡೆದ ಕನ್ನಡ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹೆಚ್ಚು ವಹಿವಾಟು ನಡೆಸಿದ ಫ್ರಾಂಚೈಸಿಗಳನ್ನು ಗುರುತಿಸಿ ಗೌರವಿಸಲಾಯಿತು. ರಾಷ್ಟ್ರಮಟ್ಟದ ಬಿಎಸ್‌ಎನ್‌ಎಲ್ ಕ್ರೀಡಾಕೂಟದಲ್ಲಿ ವಿಜೇತರಾದವರನ್ನು ಸನ್ಮಾನಿಸಲಾಯಿತು.