ಜಿಲ್ಲೆ

ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ಹಬ್ಬ: ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಹೇಳಿಕೆ

ಮಂಡ್ಯ: ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ಹಬ್ಬವಾಗಿದೆ. ಈ ಪುಣ್ಯಭೂಮಿ ಕಟ್ಟಲು ಅಪಾರ ಜನರ ಕೊಡುಗೆ ಇದೆ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಹೇಳಿದರು.

ನಗರದ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾನ್ವೇಷಣ ಸ್ಪರ್ಧೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕ ಉದಯವಾಗಿ 68 ವರ್ಷಗಳಾಗಿದ್ದು, ಮರುನಾಮಕರಣಗೊಂಡು 50 ವರ್ಷವಾಗಿದೆ. ನಾಡಿಗೆ ಹಲವು ಸಾಹಿತಿ, ರಾಜಕಾರಣಿಗಳು, ವಿಜ್ಞಾನಿಗಳು, ಅಧಿಕಾರಿಗಳು ಕೊಟ್ಟಂತಹ ಕೊಡುಗೆ ಅಪಾರವಾಗಿದೆ. ನಮ್ಮ ಸಾಂಸ್ಕೃತಿಕ ಸೋಗಡು ದೇಶಕ್ಕೆ ಮಾದರಿಯಾಗಿದೆ ಎಂದರು.

ಪಿಇಟಿ ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಅನ್ವೇಷಣೆ ಜತೆಗೆ ಓದಿನೊಂದಿಗೆ ಸಾಂಸ್ಕೃತಿಕ ಅಭಿರುಚಿ, ಕೀಡಾಸಕ್ತಿ ಹೆಚ್ಚಿಸಲು ಚಟುವಟಿಕೆಗೆ ಆದ್ಯತೆ ನೀಡಲಾಗುತ್ತಿದೆ. ನಮ್ಮ ಕಾಲೇಜಿನಲ್ಲಿ ಸಾಕಷ್ಟು ಪ್ರತಿವಂತ ವಿದ್ಯಾರ್ಥಿಗಳಿದ್ದಾರೆ. ಇದು ಆಡಳಿತ ಮಂಡಳಿಗೆ ಹೆಮ್ಮೆಯ ವಿಷಯ ಎಂದರು.

ಪ್ರಾಂಶುಪಾಲ ಡಾ.ಎಂ.ಮಂಜುನಾಥ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಸಮಯದೊಂದಿಗೆ ಓದು, ಜೀವನ ಕಟ್ಟಿಕೊಳ್ಳುವ ಸುಜ್ಞಾನ ನಿಮ್ಮಲ್ಲಿದ್ದರೆ ಯಶಸ್ಸು ಸಾಧಿಸಬಹುದು. ಕಾಲೇಜಿನ ಫಲಿತಾಂಶವು ಉತ್ತಮ ರೀತಿಯಲ್ಲಿ ಬರುತ್ತಿದೆ. ಮುಂದಿನ ದಿನದಲ್ಲಿ ಸಾಧನೆ ಮಾಡಲು ಗುರಿಯೊಂದಿಗೆ ಶ್ರಮಿಸಿ ಎಂದು ಕಿವಿಮಾತು ಹೇಳಿದರು.

ಕಾಲೇಜು ವಿದ್ಯಾರ್ಥಿ ಕ್ಷೇಮಪಾಲಾನಾಧಿಕಾರಿ ಪ್ರೊ.ಎಸ್.ಕೆ.ವೀರೇಶ್, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ವಿ.ಸವಿತಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಆರ್.ರಮೇಶ್, ಕೆ.ಎಂ.ಮಹೇಶ್‌ಕುಮಾರ್, ನಂದೀಶ್ ಇತರರಿದ್ದರು.

ಇದಕ್ಕೂ ಮುನ್ನ ಎನ್‌ಸಿಸಿ ವಿದ್ಯಾರ್ಥಿಗಳು ಗಣ್ಯರನ್ನು ವೇದಿಕೆಯತ್ತ ಪಥಸಂಚಲನ ಮೂಲಕ ಮೆರವಣಿಗೆ ಮಾಡಿ ಸ್ವಾಗತಿಸಿದರು. ಬಳಿಕ ಕನ್ನಡ ಧ್ವಜಾರೋಹಣ ಮಾಡಲಾಯಿತು. ಪ್ರತಿಭಾನ್ವೇಷಣೆ ಸ್ಪರ್ಧೆ ಅಂಗವಾಗಿ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು.