ಜಿಲ್ಲೆ

ಸಂಸ್ಕೃತಿ ಉಳಿಸುವಲ್ಲಿ ಕನ್ನಡಿಗರು ಮಾದರಿ: ಕಸಾಪ ಜಿಲ್ಲಾ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ ಹೇಳಿಕೆ

ಮಂಡ್ಯ: ಕನ್ನಡ ಭಾಷೆಯ ಸತ್ವ ಪ್ರಪಂಚಕ್ಕೆ ಅರಿವಾಗಿದೆ. ದೊಡ್ಡಣ್ಣ ಎನಿಸುವ ಅಮೆರಿಕಾದಲ್ಲಿ ಅಕ್ಕ ಕನ್ನಡ ಒಕ್ಕೂಟ ಕನ್ನಡಿಗರಿಗಾಗಿ ಕೆಲಸ ಮಾಡುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರು ಮಾದರಿಯಾಗುವ ಕೆಲಸಗಳನ್ನು ಮಾಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಅಭಿಪ್ರಾಯಪಟ್ಟರು.

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 1956ರಲ್ಲಿ ರೂಪುಗೊಂಡ ಮೈಸೂರು ರಾಜ್ಯ 1973 ರಲ್ಲಿ ಕರ್ನಾಟಕವಾಗಿ ಮರುನಾಮಕರಣಗೊಂಡು 50 ವರ್ಷಗಳಾದ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮ ಆಚರಿಸುತ್ತಿದ್ದೇವೆ. ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ ಎಂದು ಸಂಭ್ರಮಿಸುತ್ತಾ ತಮ್ಮ ಸಂಸ್ಕಾರ ಸಂಸ್ಕೃತಿ ಉಳಿಸಿಕೊಂಡು ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ 108 ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಂದಿವೆ. ಸಾಧುಂಗೆ ಸಾಧು ಮಾಧುಯರ್ಂಗೆ ಮಾಧುರ್ಯ ಎನಿಸಿರುವ ಕನ್ನಡಿಗರು ಅನ್ಯಭಾಷಿಕರೊಂದಿಗೆ ಸಹನೆಯಿಂದ ಬಾಳ್ವೆ ನಡೆಸುತ್ತಾ ಅವರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಾರಣರಾಗಿದ್ದಾರೆ. ಪಂಪನ ಕಾಲಘಟ್ಟದಿಂದ ಇಂದಿನವರೆಗೂ ಔದಾರ್ಯದಿಂದ ಬಾಳುವ ಈ ನೆಲದ ಗುಣ ಕನ್ನಡಿಗರಿಗಿದೆ ಎಂದರು.

ಕಾರ್ಯದರ್ಶಿಗಳಾದ ಧನಂಜಯ ದರಸಗುಪ್ಪೆ, ಎಂ.ಬಿ.ರಮೇಶ್, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಸಂಘ ಸಂಸ್ಥೆಯ ಪ್ರತಿನಿಧಿ ಹೊಳಲು ಶ್ರೀಧರ್, ಸಂಘಟನಾ ಕಾರ್ಯದರ್ಶಿ ಎಂ.ಸಿ.ಭಾಸ್ಕರ್, ನಗರ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ, ನಾಗರಾಜು ಇದ್ದರು.