ವಿಜಯವಾಣಿ ಸುದ್ದಿಜಾಲ ಸರ್ಜಾಪುರ
ನಾಡಿನ ಪ್ರತಿಯೊಬ್ಬ ಕನ್ನಡಿಗನೂ ಅನ್ಯ ಭಾಷೆಯ ವ್ಯಾಮೋಹ ಬಿಟ್ಟು ಕನ್ನಡ ಭಾಷೆಯಲ್ಲಿ ವ್ಯವಹಾರ ಮಾಡುವ ಮೂಲಕ ಮಾತೃಭಾಷೆಯನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಮಹಾಯೋಗಿ ವೇಮನ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಮಧುಸೂದನ್ ರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿ ಮಹಾಯೋಗಿ ವೇಮನ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.
ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಇತಿಹಾಸವಿದ್ದು, ಕನ್ನಡ ನಾಡು-ನುಡಿಗಾಗಿ ಮಹನೀಯರು ಕೊಡುಗೆ ನೀಡಿದ್ದಾರೆ. ಇಂತಹ ಭಾಷೆಯನ್ನು ನಾಡಿಗೆ ವಲಸೆ ಬಂದಿರುವವರು ಗೌರವ ಪೂರ್ವಕವಾಗಿ ಕಾಣಬೇಕು ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಅನ್ಯಭಾಷಿಕರು ಕನ್ನಡ ಭಾಷೆ ಬಗ್ಗೆ ಅಗೌರವ ತೊರುವ ರೀತಿ ನಡೆದುಕೊಳ್ಳುವುದು ಬೇಸರ ತರಿಸಿದೆ. ಮುಂದಿನ ದಿನಗಳಲ್ಲಿ ಅಂತಹವರಿಗೆ ಕನ್ನಡಿಗರು ಯಾವುದೇ ಅನುಕೂಲ ಮಾಡಿಕೊಡಬಾರದು ಎಂದರು.
ಸಮಾಜ ಸೇವಕ ಎಚ್.ಪಿ. ಶಿವಪ್ಪ ಮಾತನಾಡಿ, ಸರ್ಜಾಪುರ ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿದೆ. ರಾಜ್ಯದ ವಿವಿಧ ಗಡಿಭಾಗಗಳಲ್ಲಿ ತಮಿಳು, ತೆಲುಗು, ಮಲಯಾಳ, ಮರಾಠಿ, ಭಾಷೆಗಳು ಅಲ್ಲಿನ ಜನರನ್ನು ಪ್ರೇರೇಪಿಸಿದೆ. ಆದರೆ ಇಲ್ಲಿನ ಜನರಿಗೆ ನೆರೆಯ ತಮಿಳು ಭಾಷೆ ಬಗ್ಗೆ ವ್ಯಾಮೋಹವಿಲ್ಲ. ಇಲ್ಲಿನ ಜನರು ಹೆಚ್ಚಾಗಿ ಕನ್ನಡ ಭಾಷೆಯನ್ನು ಪ್ರೀತಿಸಿ ಆರಾಧಿಸುತ್ತಾರೆ. ಇದೇ ರೀತಿ ಕರ್ನಾಟಕದ ವಿವಿಧ ಗಡಿ ಪ್ರದೇಶದಲ್ಲಿ ನೆಲೆಸಿರುವವರು ಕನ್ನಡ ಭಾಷೆ ಮಾತನಾಡುವ ವಾತಾವರಣ ನಿರ್ಮಾಣವಾಗಬೇಕು ಎಂದರು.
ಮಹಾಯೋಗಿ ವೇಮನ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳಾದ ಎಸ್.ಕೆ.ಕೃಷ್ಣ ರೆಡ್ಡಿ, ಮುಖಂಡರಾದ ಸುದರ್ಶನ್ ರೆಡ್ಡಿ, ಜಿ.ನಾಗಾರಾಜು, ಚಿನ್ನಸ್ವಾಮಿ ರೆಡ್ಡಿ, ಜಿ. ಶ್ರೀನಿವಾಸ್, ರಾಮಸ್ವಾಮಿ, ಅಶ್ವತ್ಥ್ ಮತ್ತಿತರರು ಹಾಜರಿದ್ದರು.