ಬ್ರಹ್ಮಾವರ: ಯುವ ಸಂಘಟನೆಗಳಿಂದ ಸಮಾಜಮುಖಿ ಕೆಲಸ ಮಾಡುವ ನಾಯಕರನ್ನು ಸೃಷ್ಟಿಸುವ ಕೆಲಸವಾಗಬೇಕು ಎಂದು ಉಡುಪಿ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ ಹೇಳಿದರು.
ನೀಲಾವರ ಮಹಿಮರ್ದಿನಿ ದೇವಸ್ಥಾನದ ವಠಾರದಲ್ಲಿ ಭಾನುವಾರ ನೀಲಾವರದ ಚೈತನ್ಯ ಯುವಕ ಮಂಡಲದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾದ ಚೈತನ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಂಘದ 20ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತೆ ಸಹನಾ ಜೋಗಿ ಅವರಿಗೆ ಚೈತನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನೀಲಾವರ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘುರಾಮ ಮಧ್ಯಸ್ಥ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ವಕೀಲ ಬೈಕಾಡಿ ಸುಪ್ರಸಾದ್ ಶೆಟ್ಟಿ, ನೀಲಾವರ ಗ್ರಾಪಂ ಮಾಜಿ ಸದಸ್ಯರಾದ ಮಹೇಂದ್ರ ಕುಮಾರ್, ರಾಮದಾಸ ಅಮೀನ್, ಚೈತನ್ಯ ಯುವಕ ಮಂಡಲ ಅಧ್ಯಕ್ಷ ಶ್ಯಾಮರಾಯ ಆಚಾರ್ಯ ಸಾಂಸ್ಕೃತಿಕ ಕಾರ್ಯದರ್ಶಿ ಪುರುಷೋತ್ತಮ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಹರೀಶ್ ಆಚಾರ್ಯ ವರದಿ ವಾಚಿಸಿ, ಉಪನ್ಯಾಸಕ ಪ್ರಶಾಂತ್ ನೀಲಾವರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ರೀವತ್ಸ ರಾವ್ ಸನ್ಮಾನಿತರನ್ನು ಪರಿಚಯಿಸಿ, ಶ್ರೀಪಾದ ರಾವ್ ವಂದಿಸಿ, ಮಧುಸೂದನ ದೇವಾಡಿಗ ನಿರೂಪಿಸಿದರು.