ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕನ್ನಡ ಪುಸ್ತಕ ಪ್ರಾಧಿಕಾರವು ತನ್ನ ಪ್ರಕಟಣೆಯ ಪುಸ್ತಕಗಳಿಗೆ ಆಗಸ್ಟ್ ತಿಂಗಳಾದ್ಯಂತ ಶೇ. 50 ರಿಯಾಯಿತಿ ಘೋಷಿಸಿದೆ.
ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 704 ಶೀರ್ಷಿಕೆಯಡಿ ಕೃತಿಗಳನ್ನು ಪ್ರಕಟಿಸಿದೆ. ಈ ಕೃತಿಗಳನ್ನು ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ತಲುಪಿಸುವ ಉದ್ದೇಶದಿಂದ ಎಲ್ಲ ಪುಸ್ತಕಗಳ ಮೇಲೆ ಶೇ. 50 ರಿಯಾಯಿತಿ ನೀಡಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆ ಸೇರಿ ಎಲ್ಲ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಪ್ರಾಧಿಕಾರದಿಂದ ತೆರೆಯಲಾದ ಎಲ್ಲ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಇರಲಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ತಿಳಿಸಿದ್ದಾರೆ.
ಪ್ರಾಧಿಕಾರದ ಜಾಲತಾಣ www. kannadapustakapradhikara.com ಮೂಲಕವೂ ಖರೀದಿಸಬಹುದಾಗಿದೆ.