ಆನೇಕಲ್ : ಗಡಿಭಾಗ ಆಗಿರುವ ಆನೇಕಲ್ ತಾಲೂಕಿನಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ನನ್ನ ಜವಾಬ್ದಾರಿ ಎಂದು ಶಾಸಕ ಬಿ.ಶಿವಣ್ಣ ಹೇಳಿದರು. ಪಟ್ಟಣದ ತಾಪಂ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರದ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಆನೇಕಲ್ ರಾಜ್ಯದ ಗಡಿಯಲ್ಲಿ ಇದ್ದು ಈ ಭಾಗದಲ್ಲಿ ಕನ್ನಡಕ್ಕೆ ಹಾಗೂ ಕನ್ನಡ ರಾಜ್ಯೋತ್ಸವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ದೇವಿಯ ವೈಭವದ ಮೆರವಣಿಗೆ ಆಯೋಜಿಸಲಾಗಿದ್ದು, ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗಿಯಾಗಲಿವೆ ಎಂದರು.
ವಿದ್ಯಾರ್ಥಿಗಳಿಂದ ಸಾಂಸತಿಕ ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆಯ ಕ್ರಮ ವಹಿಸಬೇಕು. 10ನೇ ತರಗತಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಬೇಕೆಂದು ಸೂಚಿಸಿದರು. ತಹಸೀಲ್ದಾರ್ ಶಶಿಧರ್ ಮಾಡಿಯಾಳ್ ಮಾತನಾಡಿ, ತಾಲೂಕಿನ ಎಲ್ಲ ಸರ್ಕಾರಿ ಅಧಿಕಾರಿಗಳು ಕನ್ನಡ ರಾಜ್ಯೋತ್ಸವದಲ್ಲಿ ಕ್ರಿಯಶೀಲರಾಗಿ ಪಾಲ್ಗೊಳ್ಳಬೇಕು. ಭುವನೇಶ್ವರಿ ದೇವಿಯ ಮೆರವಣಿಗೆಯಲ್ಲಿ ಹೆಚ್ಚು ಜನ ಪಾಲ್ಗೊಳ್ಳುವಂತೆ ಕ್ರಮವಹಿಸಬೇಕು. ಮೆರವಣಿಗೆ ತೆರಳುವ ಪ್ರದೇಶಗಳ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.
ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕನ್ನಡ ಜಾಗೃತಿ ಅಭಿಯಾನ ನಡೆಸಲು ನವಂಬರ್ ತಿಂಗಳ 30 ದಿನಗಳು ವಿವಿಧ ಕಾರ್ಯಕ್ರಮ ರೂಪಿಸಬೇಕು. ಇದರಿಂದ ವಿದ್ಯಾರ್ಥಿಗಳ ಸಾಹಿತ್ಯ ಮತ್ತು ಸಾಂಸತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆತಂತಾಗುತ್ತದೆ ಎಂದರು. ಪುರಸಭಾ ಸದಸ್ಯರಾದ ರಾಜೇಂದ್ರ ಪ್ರಸಾದ್, ಕರವೇ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಗುರುಮೂರ್ತಿ, ಕಸಾಪ ತಾಲೂಕು ಅಧ್ಯಕ್ಷ ಆದೂರು ಪ್ರಕಾಶ್, ಜಯ ಕರ್ನಾಟಕ ಸಂಘಟನೆಯ ಕಿರಣ್, ಪ್ರಭಾಕರ ರೆಡ್ಡಿ ಮತ್ತಿತರರು ಇದ್ದರು.
ಆನೇಕಲ್ ತಾಲೂಕು ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಹೊಂದಿಕೊಂಡಿದೆ. ಈ ಭಾಗದ ಸರ್ಕಾರಿ ನೌಕರರಿಗೆ ನಗರ ಭಾಗದಲ್ಲಿ ದೊರೆಯುವ ನಗರ ಭತ್ಯೆ ಮತ್ತು ಮನೆ ಬಾಡಿಗೆ ಭತ್ಯೆ ದೊರೆಯುತ್ತಾಗಬೇಕು ಎಂಬುದು ಬಹಳ ದಿನಗಳ ಬೇಡಿಕೆಯಾಗಿದೆ. ಆನೇಕಲ್ ಭಾಗಗಳು ಜಿಬಿಎ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಇದರಿಂದ ಸರ್ಕಾರಿ ನೌಕರರಿಗೆ ಬೆಂಗಳೂರು ನಗರದಲ್ಲಿ ದೊರೆಯುವ ಮನೆ ಬಾಡಿಗೆ ಹಾಗೂ ಭತ್ಯೆ ದೊರೆಯಲಿದೆ. ಸರ್ಕಾರಿ ನೌಕರರಿಗೆ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. > ಬಿ.ಶಿವಣ್ಣ- ಶಾಸಕ