ಕಾಸರಗೋಡು: ಪರಂಪರೆಯಿಂದ ಬೆಳೆದು ಬಂದಿರುವ ಸಾಹಿತ್ಯ ಪ್ರಕಾರವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಯುವ ತಲೆಮಾರಿನಿಂದ ನಡೆಯಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಕೋಶಾಧಿಕಾರಿ ಪ್ರೊ.ಅನಂತ ಪದ್ಮನಾಭ ರಾವ್ ತಿಳಿಸಿದ್ದಾರೆ.
ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಎಡನೀರಿನ ಸ್ವಾಮೀಜೀಸ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಲಾದ ಏಕದಿನ ಕನ್ನಡ ಸಾಹಿತ್ಯ ಅಭಿಯಾನ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಶೈಕ್ಷಣಿಕ ಶಿಬಿರದ 4ನೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಡನೀರು ಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಸಮಾರಂಭ ಉದ್ಘಾಟಿಸಿದರು. ಎಡನೀರು ಸ್ವಾಮೀಜೀಸ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜ್ಯೋತಿಲಕ್ಷ್ಮೀ, ಎಡನೀರು ಸ್ವಾಮೀಜೀಸ್ ಪ್ರೌಢಶಾಲೆಯ ಪಿಟಿಎ ಅಧ್ಯಕ್ಷ ನಾರಾಯಣನ್, ಧಾರ್ಮಿಕ ಮುಂದಾಳು ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅತಿಥಿಗಳಾಗಿದ್ದರು.
ಅಕ್ಷರ ಲೋಕದ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕ ರಾಜೇಂದ್ರ ಕಲ್ಲೂರಾಯ ಅವರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ-2025 ಪ್ರದಾನ ಮಾಡಲಾಯಿತು. ಸಾಹಿತಿ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ, ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಂಘಟನೆಯ ಸ್ಥಾಪಕ ಸಂಚಾಲಕ ಡಾ.ಕೆ.ವಾಮನ್ ರಾವ್ ಬೇಕಲ್, ಜಿಲ್ಲಾ ಕೋಶಾಧಿಕಾರಿ ಸಂಧ್ಯಾರಾಣಿ, ಶಿಕ್ಷಕ ವೆಂಕಟಕೃಷ್ಣ, ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಶಾರದಾ ಮೊಳೆಯಾರ್ ಎಡನೀರು ಸ್ವಾಗತಿಸಿದರು. ಸಂಘಟನೆಯ ಉಪಾಧ್ಯಕ್ಷ ವಿಜಯರಾಜ ಪುಣಿಂಚಿತ್ತಾಯ ಬೆಳ್ಳೂರು ವಂದಿಸಿದರು.