ಜಿಲ್ಲೆ

ಕನ್ನಡ ಅಧಿಕೃತ ಆಡಳಿತ ಭಾಷೆಯನ್ನಾಗಿಸಿದ ಅರಸು

ಹರ್ಷ ನ.ಪುರೋಹಿತ

ಜಗಳೂರು: ಕನ್ನಡ ಭಾಷೆಯನ್ನು ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ, ತಾಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪಪಂ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 108ನೇ ವರ್ಷದ ದಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ರಾಷ್ಟ್ರ ಕಂಡ ಮಹಾನ್ ಮುತ್ಸದ್ದಿ ರಾಜಕಾರಣಿಗಳಲ್ಲಿ ಡಿ. ದೇವರಾಜ ಅರಸು ಅಗ್ರಗಣ್ಯರು. 1969ರಿಂದ 1979 ದಶಕದಲ್ಲಿ ಅರಸು ಯುಗವೆಂದು ಹೇಳುವುದು ವಾಡಿಕೆ.

ಈ ರಾಜ್ಯದ ಮುಖ್ಯಮಂತ್ರಿಯಾಗಿ ಅತೀ ದೀರ್ಘಕಾಲ ಆಡಳಿತ ನಡೆಸಿ, ಸಮಾಜದ ಹಿಂದುಳಿದ ವರ್ಗದವರು, ದಲಿತರು ಮತ್ತು ಬಡಜನರನ್ನು ಜಾಗೃತಗೊಳಿಸಿದರು ಎಂದರು.

ಮುಖ್ಯ ಶಿಕ್ಷಕ ಕೆ.ಎಸ್. ರವಿಕುಮಾರ್ ಮಾತನಾಡಿ, ದೇವರಾಜ ಅರಸು ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ. ತನಗೆ ಅಧಿಕಾರವಿದೆ ಎಂದು ದರ್ಪ ತೋರಿಸಲಿಲ್ಲ.

ಅವರ ಅಡಳಿತದಲ್ಲಿ ಹೆಚ್ಚು ಬಡವರು, ಹಿಂದುಳಿದ ವರ್ಗದ ಅಭಿವೃದ್ಧಿಗೆ ಶ್ರಮಿಸಿದರು. ನೆಲ, ಜಲ, ಭಾಷೆಯಲ್ಲೂ ಕಾಳಜಿ ಹೊಂದಿದ್ದ ಅರಸು ಕನ್ನಡದ ಬಗ್ಗೆ ತುಂಬ ಗೌರವವಿಟ್ಟುಕೊಂಡಿದ್ದರು ಎಂದರು.

ಈ ಸಂದರ್ಭದಲ್ಲಿ ಸಿದ್ದಮ್ಮನಹಳ್ಳಿ ಗ್ರಾಮದ ಅಲೆಮಾರಿ ಜನರಿಗೆ ಶಾಸಕ ಬಿ. ದೇವೇಂದ್ರಪ್ಪ ಹಕ್ಕುಪತ್ರಗಳನ್ನು ವಿತರಿಸಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಗ್ರೇಡ್-2 ತಹಸೀಲ್ದಾರ್ ಮಂಜಾನಂದ, ತಾಪಂ ವೈ.ಎಚ್. ಚಂದ್ರಶೇಖರ್, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಅಸ್ಮಾಬಾನು, ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಮಹೇಶ್ವರಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸಣ್ಣಸೂರಪ್ಪ, ವಾರ್ಡನ್ ದೇವೇಂದ್ರಪ್ಪ, ರಂಗಸ್ವಾಮಿ ಇದ್ದರು.