???????????????????????????????????? 
ಜಿಲ್ಲೆ

ಗ್ರಾಮೀಣ ಭಾಗದಲ್ಲಿದೆ ಕನ್ನಡದ ತಾಯಿ ಬೇರು

Kodagu

ನಿಡ್ತ: ಕನ್ನಡ ಭಾಷೆಯ ತಾಯಿ ಬೇರು ಗ್ರಾಮೀಣ ಭಾಗದಲ್ಲಿ ವ್ಯಾಪಿಸಿರುವುದರಿಂದ ಮಾತೃಭಾಷೆಗೆ ಧಕ್ಕೆಯಿಲ್ಲ. ಅದರೂ ಮೈಮರೆಯದೆ ಪ್ರತಿಯೊಬ್ಬರೂ ಕನ್ನಡಪರ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಮ್ಮೇಳನಾಧ್ಯಕ್ಷ ಸಾಹಿತಿ ನಾಗೇಶ್ ಕಾಲೂರು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿಡ್ತ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಿರುವ ಬೆಸೂರು ನಂಜಣ್ಣ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಮಾತನಾಡಿದರು.

ಭಾರತೀಯ ಭಾಷೆಗಳಲ್ಲಿ ಅತ್ಯಂತ ಸುಂದರವಾದ ಲಿಪಿಯನ್ನು ಹೊಂದಿರುವ ಭಾಷೆ ಕನ್ನಡ. ಇದು ನಮ್ಮ ಮಾತೃಭಾಷೆಯಾಗಿರುವುದು ಹೆಮ್ಮೆಯ ವಿಷಯ. ಭಾಷೆಯ ಹುಟ್ಟನ್ನು ಗಮನಿಸಿದರೆ ಸಂವಹನ ಪೂರಕವಾಗಿದ್ದು, ಅಂತರಿಕ ಗಟ್ಟಿತನವಿರುವುದರಿಂದ ಶಾಸ್ತ್ರೀಯ ಸ್ಥಾನಕ್ಕೂ ಭಾಜನವಾಗಿದೆ. ಕನ್ನಡ ಎಂದರೆ ಕೇವಲ ಭಾಷೆಯಲ್ಲ ಅದೊಂದು ಬಾಂಧವ್ಯ, ಜೀವನ ವಿಧಾನ ಎಂದು ಹೇಳಿದರು.

ಕನ್ನಡ ಭಾಷೆಯ ಪ್ರಾಚೀನತೆಯೊಂದಿಗೆ ಕನ್ನಡನಾಡಿನ ಎಲ್ಲೆಗಳನ್ನೂ ಕವಿರಾಜ ಮಾರ್ಗದಲ್ಲಿ ಹೇಳಿರುವುದು ಆಸಕ್ತಿದಾಯಕ. ಎರಡು ಸಾವಿರ ವರ್ಷಗಳಿಗೂ ಹಿಂದಿನಿಂದಲೇ ಕಾವೇರಿ ಮಡಿಲಲ್ಲಿ ಕನ್ನಡ ಇತ್ತು ಎನ್ನುವುದಕ್ಕೆ ನಿದರ್ಶನಗಳಿವೆ ಎಂದು ತಿಳಿಸಿದರು.

ಕೊಡವ ಭಾಷೆಗೆ ಕನ್ನಡ ಆಶ್ರಯ: ಕೊಡಗಿನಲ್ಲಿ ಕನ್ನಡ ನವೋದಯ ಸಾಹಿತ್ಯ ಯುಗದಲ್ಲಿ ಕೊರವಂಡ ಅಪ್ಪಯ್ಯ, ನಡಿಕೇರಿಯಂಡ ಚಿಣ್ಣಪ್ಪ, ಅಪ್ಪನೆರವಂಡ ಅಪ್ಪಚ್ಚಕವಿ, ಕೊಡಗಿನ ಗೌರಮ್ಮ, ಭಾರತೀಸುತ, ಕವಿತಾ ರೈ, ಬಿ.ಡಿ.ಗಣಪತಿ, ಪಾರ್ವತಿ ಪೂವಯ್ಯ, ಕಾಕೇಮಾನಿ ಮತ್ತಿತರರ ಕೊಡುಗೆ ಅಪಾರವಾಗಿದೆ. ಕೊಡವ ಭಾಷೆ ಕನ್ನಡ ಲಿಪಿಯನ್ನು ಆಶ್ರಯಿಸಿರುವುದರಿಂದ ಕೊಡವ ಭಾಷೆಯ ಬೆಳವಣಿಗೆಯೆಂದರೆ ಆದು ಕನ್ನಡ ಲಿಪಿಯ ಬೆಳವಣಿಗೆಯೂ ಹೌದು ಎಂದರು.
ಇತರ ಜಿಲ್ಲೆಗಳಿಗೆ ಹೋಲಿಸಿದಾಗ ಎಲ್ಲ ದೃಷ್ಟಿಯಿಂದಲೂ ಕೊಡಗು ವಿಭಿನ್ನವಾಗಿ ನಿಲ್ಲುತ್ತದೆ. ಅದಕ್ಕೆ ಕಾರಣ ಇಲ್ಲಿನ ಬಹುಭಾಷಿಕ ಸಮುದಾಯ ಮತ್ತು ಸಂಸ್ಕೃತಿ, ಕನ್ನಡ, ಕೊಡವ, ಅರೆಭಾಷೆ, ತುಳು, ಬ್ಯಾರಿ, ಮಲೆಯಾಳಂ, ತಮಿಳು, ಹವ್ಯಕ, ಉರ್ದು ಹೀಗೆ ಪಟ್ಟಿ ಬೆಳೆಯುತ್ತದೆ. ಇದರಲ್ಲಿ ಕೆಲವು ಭಾಷೆಗಳಿಗೆ ಕನ್ನಡವೇ ಲಿಪಿಯಾಗಿರುವುದರಿಂದ ಇಲ್ಲಿ ಪರೋಕ್ಷವಾಗಿ ಅಯಾ ಭಾಷೆಗಳ ಮೂಲಕ ಕನ್ನಡದ ಪೋಷಣೆಯೂ ನಡೆಯುತ್ತಿದೆ ಎಂದು ಹೇಳಿದರು.

ಭಾಷೆ ಕಲಿಕೆ ಕೌಶಲ: ಮಕ್ಕಳು ಹಲವು ಭಾಷೆಗಳನ್ನು ಒಟ್ಟಿಗೆ ಕಲಿಯುವ ಕೌಶಲ ಹೊಂದಿರುತ್ತಾರೆ. ನಾವು ಎಷ್ಟು ಭಾಷೆಗಳನ್ನು ಕಲಿಯುತ್ತೇವೋ ಅಷ್ಟು ಬಾಂಧವ್ಯ ನಮ್ಮದಾಗುತ್ತವೆ. ನಮಗೆ ಹೆಚ್ಚು ಭಾಷೆಗಳು ತಿಳಿದಿದ್ದರೆ ಒಳ್ಳೆಯದು, ಕನ್ನಡವನ್ನು ಮಾತನಾಡುವ ಮೂಲಕ ಭಾಷೆಯನ್ನು ಬೆಳಸಬೇಕು ಎಂದರು.

ಸಾಹಿತ್ಯ ಜೀವನದ ಪ್ರತಿಬಿಂಬ: ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಮೈಸೂರು ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಪ್ರೊ. ನೀಲಗಿರಿ ತಳವಾರ್ ಮಾತನಾಡಿ, ಸಾಹಿತ್ಯ ಜೀವನದ ಪ್ರತಿಬಿಂಬ ಮಾತ್ರವಲ್ಲ, ಗತಿಬಿಂಬ ಕೂಡ. ಯಶಸ್ಸು, ಸಂಪತ್ತು, ವ್ಯವಹಾರಜ್ಞಾನ ತಂದುಕೊಡುವ ಉಪದೇಶಿಸುವ ಗುಣ ಸಾಹಿತ್ಯಕ್ಕಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಪಂಪ, ಪೊನ್ನ, ರನ್ನರ ಕಾವ್ಯ, ಬಸವ, ಅಲ್ಲಮಾ, ಅಕ್ಕಮಹಾದೇವಿ, ಪುರಂದರ, ಕನಕ, ಹರಿಹರ, ರಾಘವಾಂಕ, ಜನ್ನ, ನಾರಾಯಣಪ್ಪ, ಲಕ್ಷ್ಮೀಶ, ಸರ್ವಜ್ಞರ ಕಾವ್ಯಸುದೆಯಿಂದ ಕನ್ನಡ ಭಾಷೆ, ಸಾಹಿತ್ಯ ಸಮೃದ್ಧವಾಗಿ ಸಂಸ್ಕೃತಿಯ ಕುರುವಾಗಿ ಬೆಳೆದು ಬಂದಿದೆ ಎಂದರು.

ಸಹಕಾರದಿಂದ ಯಶಸ್ವಿ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ 17 ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಮಹಿಳೆಯರ, ಮಕ್ಕಳ, ರೈತರ ಸಮ್ಮೇಳನಗಳನ್ನು ಮಾಡಿ, ಕನ್ನಡದ ಸೇವೆ ಮಾಡಲಾಗಿದೆ. ನಿಡ್ತ ಗ್ರಾಮಸ್ಥರ ಸಹಕಾರದಿಂದ ಜಿಲ್ಲಾ ಸಮ್ಮೇಳನ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿದರು. ಕಸಾಪ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಭಾರದ್ವಾಜ್ ಕೆ.ಆನಂದತೀರ್ಥ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ನಿಡ್ತ ಗ್ರಾಪಂ ಅಧ್ಯಕ್ಷ ಮುಸ್ತಾಪ, ಜಿಪಂ ಸದಸ್ಯ ಡಿ.ಬಿ.ಧರ್ಮಪ್ಪ, ನಿಡ್ತ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಪಿ.ಶೇಷಾದ್ರಿ, ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೇಕಲ್ ಸಂತೋಷ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ನಾಗಪ್ಪ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್, ವಿವಿಧ ಘಟಕಗಳ ಪದಾಧಿಕಾರಿಗಳಾದ ನಾಗರಾಜ್, ಸುರೇಶ್,ಅಬ್ದುಲ್‌ರಬ್, ಅನಂತ್ ಕುಮಾರ್ ಮತ್ತಿತರರು ಇದ್ದರು.
ಶನಿವಾರಸಂತೆ ವ್ನಿೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಭಾರತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರೈತಗೀತೆ ಹಾಡಿದರು.

ಪುಸ್ತಕ ಬಿಡುಗಡೆ: ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಬರೆದ ನುಡಿದೀಪ್ತಿ ಕೃತಿ, ಡಾ.ಬೆಸೂರು ಮೋಹನ್ ಪಾಳೇಗಾರ್ ಅವರ ಮದರಂಗಿ ಜನಪದ ಕಥೆಗಳು, ಶರ್ಮಿಳಾ ರಮೇಶ್ ಅವರ ದಿಟ್ಟೆ ಕೃತಿ, ಜಲಾಕಾಳಪ್ಪ ಅವರ ಮುದ್ರೆ ಕಾದಂಬರಿ, ಶಿಕ್ಷಕಿ ಇಂದಿರಾ ಅವರ ಕವನಸಂಕಲನ ಹೊಂಬೆಳಕು ಪುಸ್ತಕಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಸಾಹಿತ್ಯ ಪರಿಷತ್‌ನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಬೇರೆ ಭಾಷೆಗಳನ್ನು ಕಲಿಯಬೇಕು. ಆದರೆ ಕನ್ನಡ ಹೃದಯದ ಭಾಷೆಯಾಗಬೇಕು. ಗ್ರಾಮೀಣ ಭಾಗದಲ್ಲಿ ಕನ್ನಡ ಗಟ್ಟಿಯಾಗಿದೆ. ನಿಡ್ತದಂತಹ ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ಶ್ಲಾಘನೀಯ.
ವೀಣಾ ಅಚ್ಚಯ್ಯ ವಿಧಾನಪರಿಷತ್ ಸದಸ್ಯೆ

ಕನ್ನಡದ ಸಸಿಯನ್ನು ಗ್ರಾಮೀಣ ಭಾಗದಲ್ಲಿ ಬಿತ್ತಿದರೆ ಹೆಮ್ಮರವಾಗಿ ಬೆಳೆದು ಮುಂದಿನ ದಿನ ಫಲವನ್ನು ನೀಡುತ್ತದೆ. ಪ್ರತಿಯೊಬ್ಬರೂ ಟಿವಿ, ಮೊಬೈಲ್ ವ್ಯಾಮೋಹದಿಂದ ಹೊರಬಂದು ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು.
ಶ್ರೀ ಸದಾಶಿವ ಸ್ವಾಮೀಜಿ ಕಿರಿಕೊಡ್ಲಿ ಮಠ

ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆ ಉಳಿದಿದೆ. ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಸಮ್ಮೇಳನಗಳು ನಡೆದರೆ ಕನ್ನಡ ಶ್ರೀಮಂತವಾಗುತ್ತದೆ. ಗ್ರಾಮೀಣ ಭಾಗದ ಲೇಖಕರನ್ನು ಗೌರವಿಸಿದರೆ ಸಾಹಿತ್ಯ ಹುಟ್ಟುತ್ತದೆ. ಕನ್ನಡವನ್ನು ಮಾತನಾಡುವ ಮೂಲಕ ಭಾಷೆಯನ್ನು ಉಳಿಸಬೇಕು.
ಲೋಕೇಶ್ವರಿ ಗೋಪಾಲ್ ಉಪಾಧ್ಯಕ್ಷೆ ಜಿಲ್ಲಾ ಪಂಚಾಯಿತಿ