ಬೆಂಗಳೂರು: ಜನಪ್ರತಿನಿಧಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ. ಎಂ.ಆರ್. ದೊರೆಸ್ವಾಮಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿ ಮುಖ್ಯವಾಗಿದ್ದು, ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿರುವ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ. ಹಾಗಾಗಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ತಲಾ 3 ಸರ್ಕಾರಿ ಶಾಲೆಗಳನ್ನು, ಸಂಸದರು ಮತ್ತು ರಾಜ್ಯಸಭಾ ಸದಸ್ಯರು ತಲಾ 5 ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ಮಾಡಬೇಕು. ಇದರಿಂದ ವಾರ್ಷಿಕ 1 ಸಾವಿರಕ್ಕೂ ಹೆಚ್ಚು ಶಾಲೆಗಳು ಅಭಿವೃದ್ಧಿಯಾಗುತ್ತವೆ. ಅಧಿವೇಶನದಲ್ಲಿ ಈ ಬಗ್ಗೆ ಲಿಖಿತ ಆದೇಶ ಹೊರಡಿಸುವಂತೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಠ್ಯಪುಸ್ತಕ ರಚನೆಯಲ್ಲಿ 2050ಕ್ಕೆ ದೂರದರ್ಶಿತ್ವ ದಾಖಲೆ ಸಾಧಿಸಲು ಪ್ರೊ. ಕಸ್ತೂರಿರಂಗನ್ ಸಮಿತಿ ಕರಡು ಶಿಫಾರಸು ಅನುಸರಿಸಬೇಕು. ಶಾಲೆ - ಕಾಲೇಜುಗಳಿಗೆ ಶುದ್ಧ ಕುಡಿಯುವ ನೀರು, ಪ್ರತ್ಯೇಕ ಶೌಚಗೃಹ ಸೌಲಭ್ಯ ಒದಗಿಸಬೇಕು. ಗುಣಮಟ್ಟ ಶಿಕ್ಷಣ ನೀಡಲು ಶಿಕ್ಷಕರಿಗೆ ತರಬೇತಿ ಮತ್ತು ಶಿಕ್ಷಣ ಕ್ಷೇತ್ರದ ಅಪರಾಧ ಪ್ರಕರಣಗಳ ಪರಿಹಾರಕ್ಕೆ ಪ್ರತ್ಯೇಕ ನ್ಯಾಯಮಂಡಳಿ ರಚಿಸಬೇಕು. ವಿವಿಗಳಿಗೆ ಅರ್ಹ ಉಪಕುಲಪತಿ ಆಯ್ಕೆ ಮಾಡಬೇಕು. ಅಂಗವಿಕಲರ ಉನ್ನತ ಶಿಕ್ಷಣಕ್ಕೆ ಒತ್ತುಕೊಡಲು ಅಂಗವಿಕಲರ ವಿವಿ ಆರಂಭಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆ ಆಗದಂತೆ ಪರೀಕ್ಷೆ ದಿನವೇ ಆನ್ಲೈನ್ ಮೂಲಕ ಪ್ರಶ್ನೆಪತ್ರಿಕೆ ಸರಬರಾಜು ವ್ಯವಸ್ಥೆ ಸೇರಿ ಹಲವು ಸಲಹೆ ಸಲ್ಲಿಸಲಾಗಿದೆ ಎಂದು ದೊರೆಸ್ವಾಮಿ ಹೇಳಿದರು.
ಪದವಿ ಕೋರ್ಸ್ ಗಳಲ್ಲಿ ಒಂದು ವೃತ್ತಿಪರ ವಿಷಯ ಅಳವಡಿಕೆ ಮಾಡುವ ಮೂಲಕ ಪರಿಷ್ಕರಣೆ ಮಾಡಬೇಕು. ಕಾಲೇಜು ಗಳಲ್ಲಿ ಕನ್ನಡ ಭಾಷೆ ಜತೆಗೆ ವ್ಯಾವಹಾರಿಕ ಭಾಷಾ ಕಲಿಕೆಗೆ ಪ್ರತ್ಯೇಕ ತರಗತಿ ಮತ್ತು ತರಬೇತಿ ಪ್ರಯೋಗಾಲಯ ಆರಂಭಿಸಬೇಕು. ಪ್ರೊ. ಎಂ.ಆರ್. ದೊರೆಸ್ವಾಮಿ, ಶಿಕ್ಷಣ ಸುಧಾರಣೆಗಳ ಸಲಹೆಗಾರ