ಜಿಲ್ಲೆ

ಭಾಷಾಂತರ ಎರಡು ಸಂಸ್ಕೃತಿಗಳ ವಿನಿಮಯ: ಕವಿ ರಾಧಾಕೃಷ್ಣ ಉಳಿಯತ್ತಡ್ಕ ಹೇಳಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಭಾಷಾಂತರ ಎಂಬುದು ಅನುವಾದ ಮಾತ್ರವಲ್ಲ, ಇದು ಎರಡು ಸಂಸ್ಕೃತಿಗಳ ಪರಸ್ಪರ ವಿನಿಮಯ ಎಂಬುದಾಗಿ ಕನ್ನಡದ ಖ್ಯಾತ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ತಿಳಿಸಿದರು.

ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯದಲ್ಲಿ ಕನ್ನಡ-ಮಲಯಾಳಂ ಭಾಷಾಂತರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಭಾಷಾಂತರ ಎಂಬುದು ಭಾವನೆ, ಆಲೋಚನೆ, ಚಿಂತನೆ ಬೆಸೆಯುವ, ಸಂಬಂಧ ಗಟ್ಟಿಗೊಳಿಸುವ ಪ್ರಕ್ರಿಯೆಯಾಗಿದೆ. ಕಾಸರಗೋಡಿನಲ್ಲಿ ಕನ್ನಡ, ಮಲಯಾಳಂ ಭಾಷೆಗಳ ನಡುವಿನ ಅನುವಾದ ಎರಡೂ ಭಾಷೆಗಳ ನಡುವಿನ ಸಂಸ್ಕೃತಿಯ ವಿನಿಮಯವಾಗಿದೆ. ಮಂಜೇಶ್ವರ ಗೋವಿಂದ ಪೈ, ನಾಡೋಜ ಡಾ.ಕಯ್ಯರ ಕಿಞಣ್ಣ ರೈ, ಸಿ.ರಾಘವನ್, ಟಿ.ಉಬೈದ್, ವೇಣುಗೋಪಾಲ್ ಕಾಸರಗೋಡು ಮೊದಲಾದವರು ಅನುವಾದಕರಾಗಿದ್ದರು. ಅನುವಾದ ಲೋಕಕ್ಕೆ ಅವರ ಮಹತ್ತರ ಕೊಡುಗೆ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿರುವುದಾಗಿ ತಿಳಿಸಿದರು.

ದ್ರಾವಿಡ ಭಾಷಾ ಅನುವಾದಕರ ಸಂಘ(ಡಿಬಿಟಿಎ), ನುಳ್ಳಿಪ್ಪಾಡಿ ಕನ್ನಡ ಭವನ ಗ್ರಂಥಾಲಯ ಸಮಿತಿ ವತಿಯಿಂದ ಕಾರ್ಯಾಗಾರ ಆಯೋಜಿಸಲಾಗಿತ್ತು. ಡಿಬಿಟಿಎ ಅಧ್ಯಕ್ಷೆ ಡಾ.ಎಸ್.ಸುಷ್ಮಾ ಶಂಕರ್ ಅಧ್ಯಕ್ಷತೆ ವಹಿಸಿದ್ದರು.

ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲ ಮಾತನಾಡಿ, ಕನ್ನಡದ ಪ್ರಮುಖ ಸಾಹಿತ್ಯ ಕೃತಿಗಳನ್ನು ಮಲಯಾಳಂಗೆ ಭಾಷಂತರಗೊಳಿಸುವ ಕೆಲಸ ನಡೆಯಬೇಕಾಗಿದೆ. ಇದಕ್ಕೆ ಡಿಬಿಟಿಎ ಪ್ರೋತ್ಸಾಹ ಅಗತ್ಯ. ಅನುವಾದ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ಶ್ಲಾಘನೀಯ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ.ವಿ.ಕುಮಾರನ್, ಬಿ.ಟಿ.ಎ. ಉಪಾಧ್ಯಕ್ಷ ಡಾ.ಬಿ.ಎಸ್.ಶಿವಕುಮಾರ್, ಕಾರ್ಯಕ್ರಮದ ಸಂಯೋಜಕ ರವೀಂದ್ರನ್ ಪಾಡಿ, ಕನ್ನಡ ಭವನ ಕೋಶಾಧಿಕಾರಿ ಸಂಧ್ಯಾರಾಣಿ ಉಪಸ್ಥಿತರಿದ್ದರು. ನುಳ್ಳಿಪ್ಪಡಿ ಕನ್ನಡ ಭವನ ಸಂಚಾಲಕ ವಾಮನ ರಾವ್ ಬೇಕಲ್ ಸ್ವಾಗತಿಸಿದರು. ರಾಗೇಶ್ ನಿರೂಪಿಸಿದರು.

ಕೆ.ವಿ.ಕುಮಾರನ್, ಡಾ.ಬಿ.ಎಸ್.ಶಿವಕುಮಾರ್ ತರಗತಿ ನಡೆಸಿದರು. ಕನ್ನಡದಿಂದ ಮಲಯಾಳಂಗೆ, ಮಲಯಾಳಂನಿಂದ ಕನ್ನಡಕ್ಕೆ ಭಾಷಾಂತರಿಸುವ ಬಗ್ಗೆ ಕಾರ್ಯಾಗಾರ ನಡೆಯಿತು. ಡಾ.ಎಸ್.ಸುಷ್ಮಾ ಶಂಕರ್ ಮೋಡರೇಟರ್ ಆಗಿ ಸಹಕರಿಸಿದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.