ಜಿಲ್ಲೆ

ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ಜಾನಪದ, ಹಳಗನ್ನಡದ ಜ್ಞಾನವೂ ಇರಲಿ : ಪ್ರೊ.ಕೃಷ್ಣಮೂರ್ತಿ ಹನೂರು

ಮೈಸೂರು: ಕನ್ನಡ ಸಾಹಿತ್ಯ ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಮಾತ್ರ ಪರಿಣತಿ ಹೊಂದಿದರೆ ಮಾತ್ರ ಸಾಲದು. ಜಾನಪದ, ಹಳಗನ್ನಡ ಸೇರಿದಂತೆ ಎಲ್ಲ ವಿಷಯದ ಬಗ್ಗೆಯೂ ಜ್ಞಾನ ಹೊಂದಿರಬೇಕು. ಹಾಗಿದ್ದಲ್ಲಿ ಮಾತ್ರ ಭಾಷೆಗೆ ಏನಾದರು ಕೊಡುಗೆ ನೀಡಲು ಸಾಧ್ಯ ಎಂದು ವಿಮರ್ಶಕ ಪ್ರೊ.ಕೃಷ್ಣಮೂರ್ತಿ ಹನೂರು ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿ ಜೈನಶಾಸ್ತ್ರ ಮತ್ತು ಪ್ರಾಕೃತಿಕ ಅಧ್ಯಯನ ವಿಭಾಗದಲ್ಲಿ ಗುರುವಾರ ಕನ್ನಡ ಜೈನ ಮಹಾಕಾವ್ಯಗಳ ತಾತ್ವಿಕ ಜಿಜ್ಞಾಸೆ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಪಂಪ, ಪೊನ್ನ, ಕುಮಾರವ್ಯಾಸ ಸೇರಿದಂತೆ ಎಲ್ಲ ಹಳಗನ್ನಡ ಕವಿಗಳನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಇವರ ಕಾವ್ಯಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿದರೆ ಉಳಿದ ಸಾಹಿತ್ಯ ಅಧ್ಯಯನ ಸುಲಭವಾಗುತ್ತದೆ ಎಂದು ಹೇಳಿದರು.

ರಾಜ ಅರಿಕೇಸರಿಯನ್ನು ಹೊಗಳುವ ಸಂದರ್ಭ ಬಂದಾಗ ಪಂಪ ಹೆಚ್ಚೇ ಪದ್ಯ ಬರೆಯುತ್ತಾನೆ. ಇಡೀ ಸಂದರ್ಭವನ್ನು ಒಂದೇ ವಾಕ್ಯದಲ್ಲಿ ಮುಗಿಸಿರುವ ಸಂದರ್ಭಗಳು ಬಹಳ ಇವೆ. ಹಸ್ತಿನಾವತಿ ಹೇಗಿತ್ತು ಎಂಬುದಕ್ಕೆ ಚಿಕ್ಕ ವಾಕ್ಯದಲ್ಲಿ ಹೇಳಿರುವ ಅವನ ಪ್ರತಿಭೆ ದೊಡ್ಡದು ಎಂದರು.

ಕನ್ನಡ ಕಾವ್ಯ ಸಾಹಿತ್ಯದ ಉದ್ಘಾಟಕ ಪಂಪ. ಆಧುನಿಕ ಕನ್ನಡ ಸಾಹಿತ್ಯದ ಘಟ್ಟಗಳಾದ ನವೋದಯ, ನವ್ಯ, ಪ್ರಗತಿ ಶೀಲ, ದಲಿತ ಬಂಡಾಯ ಸಾರವನ್ನು ಅವನ ಕಾವ್ಯದಲ್ಲಿಯೇ ಕಾಣಬಹುದು. ಅವನು ವಿಶ್ವಕವಿ ಎಂದು ಅಭಿಪ್ರಾಯಪಟ್ಟರು.

ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಡಿ.ಶಶಿಕಲಾ ಇದ್ದರು.