ಮಂಡ್ಯ: ಕನ್ನಡ ಸಾಹಿತ್ಯಕ್ಕೆ ಕಟುಕನನ್ನು ಬದಲಿಸುವ ಮಹಾಶಕ್ತಿ ಇದೆ. ಅಂತೆಯೇ ಕನ್ನಡ ಸಾಹಿತ್ಯ ದೊಡ್ಡ ಪರಂಪರೆಯನ್ನು ಹೊಂದಿದೆ ಎನ್ನುವುದನ್ನು ಎದೆತಟ್ಟಿ ಹೇಳುಕೊಳ್ಳಬಹುದು ಎಂದು ಬೆಂಗಳೂರು ಕೇಂದ್ರ ವಲಯ ಐಜಿ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.
ನಗರದ ಮಿಮ್ಸ್‌ನ ಇಎನ್‌ಟಿ ಉಪನ್ಯಾಸ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಮಂಗಲ ಸಹಯೋಗದಲ್ಲಿ ವೈದ್ಯ ಕಲಿಕಾರ್ಥಿಗಳಿಗೆ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪ್ರಜ್ಞೆ ಕಾರ್ಯಕ್ರಮದಲ್ಲಿ ಆಧುನಿಕ ಕನ್ನಡ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು.
ಸಾಹಿತ್ಯ ಓದುವುದರಿಂದ ಜೀವನದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು. ನವೋದಯ ಕಾಲಘಟ್ಟದಲ್ಲಿ ಬಹಳ ಮುಖ್ಯವಾದ ಕವಿಗಳಿದ್ದರು. ಅದು ಪ್ರಾರಂಭವಾದಾಗ ಭಾವೋದ್ವೇಗದ ವಿಚಾರಗಳು ರಚನೆಯಾಗುವ ಜತೆಗೆ ಕಾದಂಬರಿ ರೂಪದಲ್ಲಿ ಸಾಹಿತ್ಯ ಹೊರಹೊಮ್ಮಿತು. ಕಥೆ, ಪ್ರಬಂಧ ಹುಟ್ಟಿಕೊಂಡವು. ಆತ್ಮಚರಿತ್ರೆಗಳು, ಜೀವನ ಚರಿತ್ರೆಗಳು ರಚನೆಯಾದವು. ಮುಖ್ಯವಾಗಿ ಈ ಎಲ್ಲ ರಚನೆಗಳು ಅಲ್ಲಿಂದ ಪ್ರಭಾವಗೊಂಡಿವೆ ಎಂದರು.
ಬ್ರಿಟಿಷರ ಆಳ್ವಿಕೆಯನ್ನು ನಮ್ಮ ಕನ್ನಡದ ಕಾವ್ಯಗಳು ಮತ್ತು ಸಾಹಿತ್ಯ ಪ್ರಜ್ಞೆಯು ಪ್ರಶ್ನಿಸಿವೆ. ಅಸಮಾನತೆಯ ಗಾಳಿ ಬೀಸಿದಾಗ ಅಂತಹ ದಿನಗಳಲ್ಲಿ ಸಾಹಿತ್ಯ ಹೊಸ ಅಧ್ಯಾಯ ಹುಟ್ಟಿಕೊಂಡಿದ್ದನ್ನು ಮರೆಯುವಂತಿಲ್ಲ. ಅದರಲ್ಲಿ ದಲಿತ ಬಂಡಾಯ ಸಾಹಿತ್ಯವೂ ಒಂದು. ಚಳವಳಿಗಳನ್ನು ಶುರು ಮಾಡಿ ಜನರೇ ಅಂತ್ಯ ಮಾಡುತ್ತಾರೆ. ಆದರೆ ಸಾಹಿತ್ಯ ಎಂಬುದು ನಿರಂತರವಾಗಿ ಅದು ಯಾವುದೇ ಜಾತಿ, ಧರ್ಮ, ಪಂಗಡಕ್ಕೆ ಮೀಸಲಾಗಿಲ್ಲ ಎಂಬುದನ್ನು ಇಲ್ಲಿಯತನಕವೂ ಬರೆಯುವ ಕವಿಗಳು ಹಾಗೂ ಸಾಹಿತಿಗಳನ್ನು ನೋಡುತ್ತಿದ್ದೇವೆ. ಇವರಲ್ಲಿ ಯಾವ ಜಾತಿ ಎಂಬುದನ್ನು ಊಹಿಸಲು ಆಗದ ರೀತಿಯಲ್ಲಿ ಪ್ರೀತಿ, ವಾತ್ಸಲ್ಯ ತುಂಬಿದ ನುಡಿಗಳನ್ನು ನೋಡುತ್ತೇವೆ. ಹಾಗಾಗಿ ಕನ್ನಡಕ್ಕೇ ಅದರದೇ ಆದ ಗೌರವವಿದೆ ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ಚಳವಳಿ ನಿಂತ ನೀರಲ್ಲ, ಆದರೆ ನೀರು ಹೇಗೆ ಕೊಳತೆ ನಾರುತ್ತದೋ ಅದೇ ರೀತಿ ನಾರುವ ಸಾಹಿತ್ಯ ಆಗಬಾರದು. ದಲಿತ ಸಾಹಿತ್ಯದ ಚಿಂತನಾ ಕ್ರಮದಲ್ಲಿ ಗಾಂಧೀಜಿ, ಅಂಬೇಡ್ಕರ್ ಅವರ ಚಿಂತನೆಗಳ ಮೂಲಕ ಸಾಹಿತ್ಯದಲ್ಲಿ ರಚನೆಯಾಗುತ್ತಿವೆ. ವೈದ್ಯರು, ಪೊಲೀಸರು, ಇಂಜಿನಿಯರ್ ಸೇರಿದಂತೆ ಹಲವು ಕ್ಷೇತ್ರದಲ್ಲಿರುವ ಅದೆಷ್ಟೇ ಕವಿಗಳು ಇದ್ದಾರೆ. ಕನ್ನಡ ಸಾಹಿತ್ಯವು ಜಂಗಮವಾಗಿ ಹರಿಯುತ್ತಿದೆ. ಆಧುನಿಕ ಕನ್ನಡ ಸಮಾಜದಲ್ಲಿ ರಚನೆಯು ಹೊಸ ಆಯಾಮವನ್ನು ಅದು ತಂದುಕೊಟ್ಟಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದು ತಿಳಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ತಿಳಿವಳಿಕೆ ಹೇಳಲು ಹೊರಟಿರುವುದು ಸರಿ. ಆದರೆ ಮಾನಸಿಕ ಸ್ಥಿರತೆ ಎಂಬುದನ್ನು ಎಲ್ಲರೂ ಇಟ್ಟುಕೊಂಡಿದ್ದರೆ ಅದು ಯಾವ ಕ್ಷೇತ್ರವಾದರೂ ಅದರಲ್ಲಿ ಯಶ ಕಾಣಬಹುದು. ಸಿದ್ಧತೆಯನ್ನು ಮಾಡಿಕೊಳ್ಳದೇ ಬದುಕನ್ನು ಸಾಗಿಸುತ್ತಿದ್ದೇವೆ, ಇದರಲ್ಲಿ ಪ್ರಶ್ನೆ ಮಾಡುವುದನ್ನೇ ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು.
ಬುದ್ಧ ಜಗತ್ತಿನ ಬಹುದೊಡ್ಡ ಚಿಂತಕರಾಗಿದ್ದು, ಅವರು ಯಾರೇ ಆಗಿರಲಿ, ಪ್ರಾಣಿ ಪಕ್ಷಿಯಾಗಿರಲಿ ಮೊದಲು ಪ್ರೀತಿ ಮಾಡುವುದನ್ನು ಹೇಳಿಕೊಟ್ಟರು. ದಯೆ, ದಾಕ್ಷಿಣ್ಯ, ಪ್ರೀತಿಯನ್ನು ಹೆಚ್ಚಿಸುವುದೇ ಸಾಹಿತ್ಯ ಕೃತಿಗಳಾಗಿವೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣ ಬದುಕಿನ ಮೌಲ್ಯ ಅರಿಯದೇ ಕೇವಲ ಹಣದ ವ್ಯಾಮೋಹ ಬೆಳೆಸಿಕೊಂಡು ಆರೋಗ್ಯದ ಕಾಳಜಿ ಮರೆಯುತ್ತಿದ್ದೇವೆ. ವೈದ್ಯಕೀಯ ಅಥವಾ ಬೇರಾವ ಕ್ಷೇತ್ರವೇ ಆಗಲಿ ಮಾನವೀಯತೆ ಇರಬೇಕು. ಮತ್ತೊಬ್ಬರ ಕಷ್ಟವನ್ನು ಕೇಳುವ ತಾಳ್ಮೆ ಬೆಳೆಸಿಕೊಂಡು ನಂತರ ಉತ್ತರ ನೀಡಿ ಇದರಿಂದ ಕಳೆದುಕೊಳ್ಳುವುದು ಏನಿಲ್ಲ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ವೈದ್ಯಕೀಯ ವಿಷಯ ಓದುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಎಂಬುದು ಅಧ್ಯಯನದ ಸಮಯದಲ್ಲಿ ತರ್ಜುಮೆಗೆ ಅನುಕೂಲವಾಗುತ್ತದೆ. ಭಾಷೆ ಬಗ್ಗೆ ಹೆಮ್ಮೆ ಹಾಗೂ ಅಭಿಮಾನ ಬರುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿ ಆಗುತ್ತದೆ. ಶಿಕ್ಷಕರ ಕ್ಷೇತ್ರ ಎಷ್ಟು ಪ್ರಮುಖವೋ ಅಷ್ಟೇ ಪ್ರಮುಖವಾಗಿ ಶುಶ್ರೂಷಕಿ ಕೆಲಸ ಕಾಣುತ್ತದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಏಕೆ ಬಂದಿದೆ ಎನ್ನುವುದನ್ನಾದರೂ ವಿದ್ಯಾರ್ಥಿಗಳು ಹೇಳುವ ಮಟ್ಟಕ್ಕೆ ವಿಷಯ ತಿಳಿದುಕೊಳ್ಳಬೇಕು. ಸಂವಿಧಾನ ಹೇಳಿರುವುದನ್ನು ಒಂದು ಸಾವಿರ ವರ್ಷಗಳ ಹಿಂದೆಯೇ ಕನ್ನಡ ಸಾಹಿತ್ಯ ಹೇಳಿದೆ ಎಂದರು.
ಸಾಹಿತಿ ಮ.ರಾಮಕೃಷ್ಣ ಪ್ರಾಚೀನ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ಎಚ್.ಆರ್.ಸುಜಾತಾ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಇತರರಿದ್ದರು.