ಜಿಲ್ಲೆ

ಕನ್ನಡ ಭಾಷೆ ಕಾನೂನು ರಚನೆ ಅಗತ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ಶಾಲೆಗಳನ್ನು ಉಳಿಸಲು ಹಾಗೂ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಕನ್ನಡ ಭಾಷೆ ಕುರಿತ ಕಾನೂನು ರಚನೆ ಮಾಡುವುದು ಮುಖ್ಯ ಎಂದು ಸಚಿವ ಎಚ್​.ಕೆ. ಪಾಟೀಲ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಘದ 135ನೇ ಸಂಸ್ಥಾಪನಾ ದಿನಾಚರಣೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ ಬೆಳೆಸಲು, ರಾಜ್ಯದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಉದ್ದೇಶಕ್ಕೆ ಕನ್ನಡ ಭಾಷೆ ಕಾನೂನು ರಚನೆ ಅಗತ್ಯ. ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಮಾದರಿ ಮಸೂದೆ ರಚನೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಪ್ರಜ್ಞಾವಂತರು, ಬುದ್ಧೀಜಿವಿಗಳು, ಸಾಹಿತಿಗಳು, ಶಿಕ್ಷಣ ತಜ್ಞರು ಸೇರಿ ಸಂಘದ ಮುಂದಾಳತ್ವದಲ್ಲಿ ಮಾದರಿ ಮಸೂದೆ ರೂಪಿಸಿ ಕಳಿಸಿದರೆ ಅದನ್ನು ಕನ್ನಡಿಗರರಿಗೆ ಒಪ್ಪಿತವಾಗುವ ರೀತಿ ಕಾನೂನು ರೂಪಿಸಲು ಸಾಧ್ಯ ಎಂದರು.
ಕನ್ನಡ ಶಾಲೆಗಳನ್ನು ಮುಚ್ಚುವುದು ನೋವಿನ ಸಂಗತಿ. ಇದಕ್ಕೆ ಕನ್ನಡಿಗರು ಪರಿಹಾರ ನೀಡಬೇಕು. ಗೋಕಾಕ ಚಳವಳಿ ಸೇರಿ ಕನ್ನಡ ನೆಲ, ಜಲ, ಭಾಷೆಗಾಗಿ ಹೋರಾಟ ನಡೆಸಿದ ಸಂಘ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು. ಅಂದಾಗಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಜಾಗೃತರಾಗಲು ಸಾಧ್ಯ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಇನ್ನೂ ಹೆಚ್ಚು ಶಕ್ತಿಯುತವಾಗಲಿ. ಸಂಘ ಪ್ರತಿ 3-4 ತಿಂಗಳಿಗೊಮ್ಮೆ ಮಂತ್ರಿಗಳನ್ನು ಭೇಟಿ ಮಾಡಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು. ಈ ಕಾರ್ಯದಿಂದ ಮಂತ್ರಿಗಳನ್ನು ಚಿಂತೆಗೊಳಪಡಿಸುತ್ತದೆ. ಇಂತಹ ಕಾರ್ಯವನ್ನು ಪಾಟೀಲ ಪುಟ್ಟಪ್ಪ ಮಾಡುತ್ತಿದ್ದರು. ನೀವೂ ಅದೇ ರೀತಿ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಹಂಪಿ ಕನ್ನಡ ವಿಶ್ವ ವಿದ್ಯಾಲಯ ವಿಶ್ರಾಂತ ಕುಲಪತಿ ಮಲ್ಲಿಕಾ ಘಂಟಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಕನ್ನಡ ಉಳಿಸುವ ಕೆಲಸವಾಗಿದೆ. ಕನ್ನಡ ಕಲಿತವರಿಗೆ ಉದ್ಯೋಗ ಸಿಕ್ಕಿದ್ದರೆ ಕನ್ನಡಕ್ಕೆ ಈ ಆಪತ್ತು ಬರುತ್ತಿರಲಿಲ್ಲ. ಜತಗೆ ಕನ್ನಡ ಉಳಿಸುವ ಕೆಲಸವಾಗಲಿ ಎಂದು ಹೇಳುವ ಸ್ಥಿತಿಯೂ ಬರುತ್ತಿರಲಿಲ್ಲ. ಸರ್ಕಾರ ಕನ್ನಡಿಗರ ಸಾಮರ್ಥ್ಯದ ಮೇಲೆ ನಿಂತಿದೆಯೋ? ಅಥವಾ ಉದ್ಯಮ ಪತಿಗಳ ಸಾಮರ್ಥ್ಯದ ಮೇಲೆ ನಿಂತಿದೆಯೊ? ಎಂಬ ಪ್ರಶ್ನೆ ಮೂಡಿದೆ. ಉದ್ಯಮ ಸ್ಥಾಪನೆಗೆ ಕನ್ನಡ ನೆಲದಲ್ಲಿ ಎಲ್ಲ ಸೌಕರ್ಯಗಳನ್ನು ನೀಡಿದರೂ ಕನ್ನಡಿಗರಿಗೇ ಉದ್ಯೋಗ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸಿಎಂಡಿಆರ್​ ನಿರ್ದೇಶಕ ಬಸವಪ್ರಭು ಜಿರ್ಲಿ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸತೀಶ ತುರಮರಿ, ಶಂಕರ ಕುಂಬಿ, ವಿಶ್ವೇಶ್ವರಿ ಹಿರೇಮಠ, ಮಹೇಶ ಹೊರಕೇರಿ, ಗುರು ಹಿರೇಮಠ, ವೀರಣ್ಣ ಒಡ್ಡೀನ, ಪದಾಧಿಕಾರಿಗಳು, ಇತರರು ಇದ್ದರು.
ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶ್ರೀಶೈಲ ಹುದ್ದಾರ ನಿರೂಪಿಸಿದರು.