ಮಡಿಕೇರಿ: ಕನ್ನಡ ಭಾಷೆ ನಮ್ಮ ರಾಜ್ಯದ ನಮ್ಮೆಲ್ಲರ ಆತ್ಮಗೌರವದ ಹೆಮ್ಮೆಯ ಪ್ರತೀಕ. ಕನ್ನಡ ಎಂಬುದು ಕೇವಲ ಭಾಷೆಯಲ್ಲ ಅದೊಂದು ಸಂಸ್ಕೃತಿ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಲೇಖಕಿ, ಸ್ತ್ರೀವಾದಿ ಚಿಂತಕಿ ಡಾ.ಕವಿತಾ ರೈ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಹಲವಾರು ಭಾಷೆಗಳನ್ನು ಮಾತನಾಡುವವರು ಇದ್ದಾರೆ. ಆದರೆ ಬೇರೆ ಭಾಷೆಯವರಿಗಿರುವ ಭಾಷಾಭಿಮಾನ ಕನ್ನಡಿಗರಲ್ಲಿ ಇಲ್ಲ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಕನ್ನಡ ಭಾಷೆಯ ಸ್ಥಾನ ಮಹತ್ವವಾದದ್ದು. ಭಾಷೆಯ ಕುರಿತು ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಹಿತ್ಯ ಕೃತಿಗಳನ್ನು ಓದುವ ಮೂಲಕ ಉತ್ತಮ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶಿಕ್ಷಣಾಧಿಕಾರಿ ಡಾ.ಬಿ.ಸಿ.ಸಿದ್ದೇಗೌಡ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಸಮೃದ್ಧ ಪರಂಪರೆ ಇದೆ. ಜಗತ್ತಿನಲ್ಲಿ ಇರುವ ಸುಮಾರು ಆರು ಸಾವಿರ ಭಾಷೆಗಳಲ್ಲಿ ಕನ್ನಡ ವಿಶಿಷ್ಟವಾದ ಭಾಷೆ. ಕನ್ನಡ ನಾಡಿನಲ್ಲಿ ಪರಭಾಷಿಗರ ಸಂಖ್ಯೆ ಹೆಚ್ಚುತ್ತಿದ್ದು ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ ಎಂಬ ಜೇಡರ ದಾಸಿಮಯ್ಯನವರ ವಚನದಂತೆ ಕನ್ನಡಿಗರು ತಮ್ಮ ಭಾಷೆಯ ನಿಜಸತ್ವವನ್ನರಿಯದೆ ಪರಭಾಷಾ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಡಿ.ಕೆ.ಉಷಾ ಮಾತನಾಡಿ, ಘನ ಪರಂಪರೆ ಹೊಂದಿರುವ ಕನ್ನಡ ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲೂ ಸಮೃದ್ಧತೆಯನ್ನು ಕಂಡಿದೆ. ಬಹುಮುಖಿ ನೆಲೆಯಲ್ಲಿ ತನ್ನ ಬಾಹುಳ್ಯವನ್ನು ಚಾಚಿಕೊಂಡಿದೆ. ವೈಜ್ಞಾನಿಕ ಮನೋಧರ್ಮದ, ಸಮಾಜಮುಖಿ ಚಿಂತನೆಯ ಬರಹಗಾರರು ಎಂಬ ಅರಿವು ಮತ್ತು ಹೊಸ ಚಿಂತನೆಗಳ ಮೂಲಕ ಕನ್ನಡ ಸಾಹಿತ್ಯವನ್ನು ವಿಶಿಷ್ಟವಾಗಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಕೆ.ಸಿ.ಡಾ.ದಯಾನಂದ, ಕನ್ನಡ ಭಾಷೆಯು ಅಳಿಯುವ ಭಾಷೆಯಲ್ಲ. ಕನ್ನಡವನ್ನು ಬಳಸುವ ಮೂಲಕ ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಪಿ.ಟಿ.ನರೇಂದ್ರ, ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಆರ್.ರಘುರಾಜು ಇದ್ದರು. ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.