ಮೊಳಕಾಲ್ಮೂರು: ಜಗತ್ತಿನ ಭಾಷೆಗಳಲ್ಲಿ ಅತ್ಯಂತ ಶ್ರೇಷ್ಠತೆ ಹೊಂದಿರುವ ಕನ್ನಡ ಭಾಷೆಯ ಅಸ್ಮಿತೆ ಉಳಿವು-ಬೆಳವಣಿಗೆ ಪ್ರತಿಯೊಬ್ಬರ ಕನ್ನಡಿಗರ ಆದ್ಯ ಕರ್ತವ್ಯವಾಗಬೇಕು ಎಂದು ವಕೀಲ ರಾಜಶೇಖರನಾಯಕ ತಿಳಿಸಿದರು.
ಕಸಾಪ ವತಿಯಿಂದ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಲ್ಲಿಸಿ ಮಾತನಾಡಿದರು.
ಕನ್ನಡ ಭಾಷೆಯ ಬೆಳವಣಿಗೆಗೆ ನಾವೆಲ್ಲರೂ ಸಾಂಸ್ಕೃತಿಕ ರಾಯಭಾರಿಗಳಂತೆ ಕಾರ್ಯನಿರ್ವಹಿಸಬೇಕು. ಮಾತೃಭಾಷೆಯ ಋಣ ತೀರಿಸಲು ಶ್ರಮಿಸಬೇಕು ಎಂದರು.
ಇತಿಹಾಸದಲ್ಲಿ ಗತವೈಭವವನ್ನು ಕಂಡಿರುವ ಕನ್ನಡ ಭಾಷೆ ಬದುಕಿನ ಮೌಲ್ಯದಲ್ಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಅನ್ಯ ಭಾಷೆಯನ್ನು ಗೌರವಿಸುವ ಜತೆಗೆ ಕನ್ನಡವನ್ನು ಪ್ರೀತಿಸುವ, ಅಭಿಮಾನಿಸುವ ಕೆಲಸ ಹೆಚ್ಚು ಆಗಬೇಕು ಎಂದು ಹೇಳಿದರು.
ಆಧುನೀಕ ಜಗತ್ತಿನಲ್ಲಿ ಶಿಕ್ಷಣವೇ ಭೂಷಣ ಮತ್ತು ಪ್ರಮುಖ ಅಸ್ತ್ರ. ಆದರೆ, ಶಿಕ್ಷಣವೆಂದಾಕ್ಷಣ ಅಂಕ ಗಳಿಕೆಯೇ ಪ್ರಧಾನ ಆಗಬಾರದು. ಅಧ್ಯಯನ, ಕಠಿಣ ಶ್ರಮದ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ.ಗೋವಿಂದಪ್ಪ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಟಿವಿ ಮತ್ತು ಮೊಬೈಲ್ ವ್ಯಾಮೊಹಕ್ಕೆ ಒಳಗಾಗಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಪರಿಣಾಮ ಓದುವ ಹವ್ಯಾಸ ಕ್ಷೀಣಿಸಿ, ಜ್ಞಾನಭಂಡಾರ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಸಾಪ ತಾಲೂಕಾಧ್ಯಕ್ಷ ಜಿಂಕಾ ಶ್ರೀನಿವಾಸ, ಬಿಇಒ ಕೆ.ತಿಪ್ಪೇಸ್ವಾಮಿ, ರಾಂಪುರ ರುದ್ರಾಕ್ಷಿ ಮಠದ ಡಾ. ವೀರಭದ್ರಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷೆ ಎಚ್.ಎನ್.ಸುಜಾತಾ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎಸ್.ಈರಣ್ಣ, ಎಂ.ಮಲ್ಲಿಕಾರ್ಜುನ, ಎಚ್.ಸಿದ್ದಯ್ಯ, ಎ.ರಾಜಣ್ಣ, ಬಿ.ಎನ್.ತಿಪ್ಪೇಸ್ವಾಮಿ, ಬಿ.ಬಡಯ್ಯ, ಸಿ.ರವಿಕುಮಾರ ಇದ್ದರು.