ಜಿಲ್ಲೆ

ಕನ್ನಡ ಭಾಷೆಗಿದೆ ಮನಸ್ಸು ಬೆಸೆಯುವ ಶಕ್ತಿ: ಟಿ. ಸತೀಶ್ ಜವರೇಗೌಡ ಅಭಿಮತ

ಮೈಸೂರು: ಕನ್ನಡ ಭಾಷೆಗೆ ಮನಸ್ಸುಗಳನ್ನು ಬೆಸೆಯುವ ಶಕ್ತಿಯಿರುವುದರಿಂದ ಸರಾಗ ಸಂವಹನಕ್ಕೆ ನೆರವಾಗುತ್ತದೆ. ಹಾಗೆಯೇ ಸಾಮರಸ್ಯ ಮತ್ತು ವಿಶ್ವಮಾನವತೆಯ ಮೌಲ್ಯಗಳನ್ನು ಬೆಳೆಸುವ ಗುಣವನ್ನೂ ಹೊಂದಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ. ಸತೀಶ್ ಜವರೇಗೌಡ ಬಣ್ಣಿಸಿದರು.

ಮೈಸೂರು ತಾಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೂಲಕ ಅರ್ಥಪೂರ್ಣವಾದ ಆತ್ಮವಿಶ್ವಾಸದ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ನುಡಿದರು.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿಯೂ ಆಂಗ್ಲ ಭಾಷೆಯ ಪ್ರಾಬಲ್ಯ ಹೆಚ್ಚಾಗುತ್ತಿದೆ. ಇಲ್ಲಿನ ಜನರು ಕೂಡ ಆಂಗ್ಲ ಪದಗಳನ್ನು ದಿನನಿತ್ಯ ಬಳಸುತ್ತಿದ್ದಾರೆ. ಇದರಿಂದ ಕನ್ನಡ ಭಾಷೆಗೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನೇ ನಿತ್ಯದ ಸಂವಹನದಲ್ಲಿ ಹೆಚ್ಚಾಗಿ ಬಳಸಬೇಕು. ಆ ಮೂಲಕ ಕನ್ನಡದ ಅಸ್ತಿತ್ವನ್ನು ಉಳಿಸಬೇಕು ಎಂದು ಕರೆ ನೀಡಿದರು.

‘ಕರ್ನಾಟಕ ಏಕೀಕರಣ’ದ ಬಗ್ಗೆ ಉಪನ್ಯಾಸ ನೀಡಿದ ಕನ್ನಡ ಶಿಕ್ಷಕ ರಂಗಸ್ವಾಮಿ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಪರಂಪರೆ ಇದೆ. ಅದಕ್ಕೆ ಶಾಸ್ತ್ರೀಯ ಸ್ಥಾನ ಪಡೆದಿದೆ. ಭಾರತೀಯ ಭಾಷೆಗಳಲ್ಲೇ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು, ಕನ್ನಡ ಸಾಹಿತ್ಯದ ಮೌಲ್ಯವನ್ನು ಹೆಚ್ಚಿಸಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ಪಿ.ಎನ್.ವೀಣಾ ಮಾತನಾಡಿ, ಮಕ್ಕಳು ಕನ್ನಡ ಭಾಷೆಯನ್ನು ಸ್ಪಷ್ಟವಾಗಿ, ಶುದ್ಧವಾಗಿ ಮಾತನಾಡಬೇಕು ಮತ್ತು ಬರೆಯಬೇಕು. ಕನ್ನಡದ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರಿಯ ಶಿಕ್ಷಕರಾದ ಶಶಿಧರ್, ಮಹಮ್ಮದ್ ಸುಹೇಲ್, ಸುನೀಲ್ ಕುಮಾರ್, ಶಿಕ್ಷಕಿಯರಾದ ಕೆ.ಕಲ್ಪನಾ, ಜೆ.ಸತ್ಯವತಿ, ರೂಹಿ ಅಬ್ಜಾ, ಎನ್. ಸುಜಾತಾ, ಸೌಜನ್ಯಾ ಇತರರು ಇದ್ದರು. ವಿದ್ಯಾರ್ಥಿನಿಯರಾದ ನಂದಿನಿ ಮತ್ತು ಜಯಶ್ರೀ ‘ಕರ್ನಾಟಕ ಏಕೀಕರಣ’ ಕುರಿತು ಭಾಷಣ ಮಾಡಿದರು. ನಾಡು- ನುಡಿ ಕುರಿತ ಹಾಡು ಮತ್ತು ನೃತ್ಯ ಕಾರ್ಯಕ್ರಮಗಳು ಜರುಗಿದವು.