ಜಿಲ್ಲೆ

ನಾಮಫಲಕಗಳಲ್ಲಿ ಶೇ.60 ಕನ್ನಡ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಕುಮಾರ ಕಟ್ಟುನಿಟ್ಟಿನ ಸೂಚನೆ

ಮಂಡ್ಯ: ಸರ್ಕಾರದ ಆದೇಶದ ಪ್ರಕಾರ ಸ್ಥಳೀಯ ಪ್ರಾಧಿಕಾರ, ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳಿಂದ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಕಟ್ಟಡ, ಕೈಗಾರಿಕೆ ಕಟ್ಟಡ, ಆಸ್ಪತ್ರೆ, ಪ್ರಯೋಗಾಲಯ, ಅಂಗಡಿ, ಹೋಟೆಲ್ ಅನಾವರಣಗೊಳಿಸುವ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ -2022 ಅನ್ನು ಸಮರ್ಪಕವಾಗಿ ಜಾರಿಗೊಳಿಸುವ ಸಂಬಂಧ ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ- 2024 ರನ್ವಯ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಮಫಲಕದಲ್ಲಿ ಕನ್ನಡ ಭಾಷೆ ಶೇ.60 ಇರಬೇಕೆಂದು ಈಗಾಗಲೇ ಆದೇಶ ಹೊರಡಿಸಲಾಗಿದೆ. ಇದನ್ನು ಅನುಸರಿಸದಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ಅಥವಾ ಅನುಷ್ಠಾನ ಪ್ರಾಧಿಕಾರ ಪರವಾನಗಿ ರದ್ದು ಪಡಿಸಲಾಗುವುದು. ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಕೈಗಾರಿಕೆ ಇಲಾಖೆ, ಅಂಗಡಿ, ಮುಂಗಟ್ಟಿಗೆ -ಸ್ಥಳೀಯ ಸಂಸ್ಥೆಗಳು, ಖಾಸಗಿ ಶಾಲಾ ಕಾಲೇಜು- ಶಿಕ್ಷಣ ಇಲಾಖೆ, ವಿವಿಧ ಇಲಾಖೆಗಳು 7 ದಿನದೊಳಗಾಗಿ ಪರಿಶೀಲನೆ ನಡೆಸಿ ನಾಮಫಲಕಗಳಲ್ಲಿ ಶೇ.60 ಕನ್ನಡ ಭಾಷೆ ಬಳಸಿರುವ ಬಗ್ಗೆ ವರದಿ ನೀಡಬೇಕು. ಶೇ.60 ಇಲ್ಲದಿದ್ದಲ್ಲಿ ವಿಧಿಸಿರುವ ದಂಡ ಅಥವಾ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡಬೇಕು ಎಂದರು.

ಈ ಅಧಿನಿಯಮದಲ್ಲಿ ಮೊದಲನೇಯ ಬಾರಿ ಅಪರಾಧಕ್ಕೆ 5 ಸಾವಿರ ರೂ., ಎರಡನೇಯ ಬಾರಿಗೆ 10 ಸಾವಿರ ರೂ. ಮತ್ತು ಮೂರನೆ ಬಾರಿಗೆ 20 ಸಾವಿರ ರೂ. ದಂಡ ಮತ್ತು ನಾಲ್ಕನೇ ಬಾರಿಗೆ ದಂಡದೊಂದಿಗೆ ಪರವಾನಗಿ ರದ್ದುಪಡಿಸಲು ಅವಕಾಶವಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕನ್ನಡ ಭಾಷಾ ನಾಮಪಲಕ ಶೇ.60 ಅಳವಡಿಕೆಯಾಗಿಲ್ಲ ಎಂದು ದೂರುಗಳು ಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ಕನ್ನಡ ರಾಜ್ಯದ ಹಾಗೂ ಸ್ಥಳೀಯ ಪ್ರಾಧಿಕಾರದ ಅಧಿಕೃತ ಭಾಷೆಯಾಗಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಭಾಷೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಎಲ್ಲ ನಾಮಫಲಕಗಳು ಕಡ್ಡಾಯವಾಗಿ ಶೇ.60 ಕನ್ನಡ ಭಾಷೆಯಲ್ಲಿ ಹಾಗೂ ಶೇ. 40 ಇತರ ಭಾಷೆಗಳಲ್ಲಿ ಇರಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ಅನುಷ್ಠಾನದ ಬಗ್ಗೆ ವರದಿ ಮಾಡಿ ನೋಟಿಸ್ ಜಾರಿ ಮಾಡಿರುವ ಹಾಗೂ ದಂಡ ವಿಧಿಸಿರುವ ಬಗ್ಗೆ ವರದಿಯನ್ನು ಸಲ್ಲಿಸಬೇಕು. ನಾಮಫಲಕ ಬರೆಯುವಾಗ ಮೊದಲು ಅಥವಾ ಮೇಲಿನ ಸಾಲನ್ನು ಕನ್ನಡ ಭಾಷೆಯಲ್ಲಿ ಬರೆಯಬೇಕು ಶೇ.60 ಕನ್ನಡ ಭಾಷೆಯಲ್ಲಿರಬೇಕು. ನಾಮಫಲಕ ನೋಡಿದ ಸಂದರ್ಭದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ ಕನ್ನಡಾಭಿಮಾನ ಮೆರೆಯಬೇಕು. ಕನ್ನಡ ಭಾಷೆಗೆ ನೀಡಿದ ನಂತರ ಕೆಳಭಾಗದಲ್ಲಿ ಆಂಗ್ಲ, ಹಿಂದಿ ಬೇರೆ ಭಾಷೆಗಳನ್ನು ಬಳಸಿಕೊಳ್ಳಿ ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಡಿಡಿಎಲ್‌ಆರ್ ಉಮೇಶ್ ಇತರರಿದ್ದರು.