ಕೋಲಾರ: ಗಡಿ ಜಿಲ್ಲೆಗಳಲ್ಲಿ ಕನ್ನಡ ಪಥನಮುಖಿಯಾಗುವ ಆತಂಕ ಕಾಡುತ್ತಿದೆ, ಇದರಿಂದಾಗಿ ಕನ್ನಡವನ್ನು ಕನ್ನಡಿಗರಾಗಿ ನಾವು ಉಳಿಸದಿದ್ದರೆ, ಜಗತ್ತಿನ ಯಾವುದೇ ಶಕ್ತಿ ಉಳಿಸಲಾರದು. ಭಾಷೆ ವಿಷಯದಲ್ಲಿ ಆತ್ಮವಂಚನೆ ಇಲ್ಲದೆ ರಕ್ಷಣೆ ಮಾಡಬೇಕು ಎಂದು ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರವು ಕನ್ನಡಪರ ತೀಮಾರ್ನ ತೆಗೆದುಕೊಂಡರೆ, ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಸರ್ಕಾರವು 3,000ಕ್ಕೂ ಹೆಚ್ಚಿನ ಆದೇಶ ಹೊರಡಿಸಿದೆ. ಗಡಿಜಿಲ್ಲೆಯಲ್ಲಿ ಶಾಲೆಗಳನ್ನು ಹೆಚ್ಚಾಗಿ ಕನ್ನಡಿಕರಣಗೊಳಿಸಬೇಕು, ಹೊರಗಿನಿಂದ ಬರುವವರನ್ನು, ಕನ್ನಡಿಗರೊಂದಿಗೆ ವ್ಯವಹರಿಸುವ ಅನ್ಯಭಾಷಿಕರನ್ನು ಕನ್ನಡದಲ್ಲಿಯೇ ಮಾತನಾಡಿಸಿ, ನಮ್ಮ ಭಾಷೆ ಕಲಿಸಬೇಕು ಎಂದರು.
ಜಾಗತಿಕ ಮಾರುಕಟ್ಟೆಗಳು ಭಾಷೆಯ ಮೇಲೆ ಮಹತ್ತರ ಪರಿಣಾಮ ಉಂಟು ಮಾಡುತ್ತಿವೆ. ಕರ್ನಾಟಕಕ್ಕೆ ಹತ್ತು ಲಕ್ಷ ಕೋಟಿ ರೂ. ಹೂಡಿಕೆ ಬರುವ ನಿರೀಕ್ಷೆಯಿದ್ದು, ಉದ್ಯೋಗಾವಕಾಶ ಹೆಚ್ಚಾಗುತ್ತದೆ. ದೊಡ್ಡ ಭಾಷೆಗಳ ಆಕ್ರಮಣದಿಂದ ಸಣ್ಣ ಸಮುದಾಯಗಳು, ಭಾಷೆಗಳನ್ನು ಸಾಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬೇಸರಿಸಿದರು.
ದೇಶದಲ್ಲಿ 19,569 ಭಾಷೆಗಳು ಚಾಲ್ತಿಯಲಿದ್ದು, ಈ ಪೈಕಿ 22 ಭಾಷೆಗಳಿಗೆ ಸಂವಿಧಾನದ ಮಾನ್ಯತೆ ಸಿಕ್ಕಿದೆ. 2,200 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಸಮೃದ್ಧವಾಗಿದೆ. ಆದರೆ ಜಾಗತಿಕ ಮಾರುಕಟ್ಟೆ ಪರಿಣಾಮ ನಮ್ಮ ಭಾಷಿಕರಿಗೆ ಅವಕಾಶಗಳು ತಪು$್ಪತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಭಾಷೆಯನ್ನು ಜನಸಂಖ್ಯೆ ಆಧಾರದ ಮೇಲೆ ಅವೈಜ್ಞಾನಿಕವಾಗಿ ಅಳೆಯಲಾಗುತ್ತಿದೆ. ಆದರೆ, ಕನ್ನಡದ ಕಾನೂನುಗಳು ಸಮರ್ಥವಾಗಿಲ್ಲ. ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳಬೇಕಾದರೆ, ನಮ್ಮ ಭಾಗದ ಯುವಕರಿಗೆ ಅಷ್ಟೊಂದು ಕೌಶಲದ ತರಬೇತಿ ಇರುವುದಿಲ್ಲ. ಪರಿಣಾಮ ಸ್ಥಳಿಯ ಕನ್ನಡಿಗರಿಗೆ ಕೆಲಸಗಳನ್ನು ಕೊಡುವುದು ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ತಿಮ್ಮೇಶ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವಿಣ್ ಪಿ.ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಮಂಗಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೋಲಾರ ಬಿ.ನಿಖಿಲ್, ಕೆಜಿಎಫ್ ಶಾಂತರಾಜು ಉಪಸ್ಥಿತರಿದ್ದರು.
ಶೇ.60 ಮಾತೃಭಾಷೆ ಬಳಕೆ ಕಡ್ಡಾಯ
ಅಧಿಕಾರಿಗಳು ಕನ್ನಡ ಭಾಷೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಕನ್ನಡ ಭಾಷೆಯನ್ನು ಇಲಾಖೆಗಳಲ್ಲಿ ಅನುಷ್ಠಾನಗೊಳಿಸಲು ಸಮಸ್ಯೆಗಳಿದ್ದರೆ ಅವುಗಳನ್ನು ಸಭೆಗಳಲ್ಲಿ ಚರ್ಚಿಸಿದರೆ ಸರ್ಕಾರದ ಮಟ್ಟದಲ್ಲಿ ಮಾತನಾಡಿ ಬಗೆಹರಿಸಲಾಗುವುದು. ಪ್ರತಿಯೊಂದು ಇಲಾಖೆಯಲ್ಲಿ ಒಂದು ಹೆಜ್ಜೆ ಮುಂದೆ ಬಂದು ನಾವೆಲ್ಲರೂ ಸೇರಿ ನಮ್ಮ ಮಾತೃಭಾಷೆಯನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದರು. ಸರ್ಕಾರದ ಆದೇಶಗಳು, ಸುತ್ತೋಲೆಗಳು, ನಿಯಮಗಳು, ಪ್ರಕಟಣೆಗಳು ಸೇರಿ ವ್ಯವಹಾರವನ್ನು ಕನ್ನಡದಲ್ಲಿ ಮಾಡಬೇಕು. ಸಂಕ್ಷಿಪ್ತ ಆಡಳಿತ ಪದಕೋಶವನ್ನು ಅಧಿಕಾರಿಗಳು ತಪ್ಪದೆ ಕಚೇರಿಯ ಪುಸ್ತಕದಲ್ಲಿ ಇರಿಸಿಕೊಳ್ಳಬೇಕು. ಎಲ್ಲ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಸಬೇಕು. ಈ ಬಗ್ಗೆ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.
ಗಡಿಜಿಲ್ಲೆಯ ನಡಾವಳಿ ಅರಿವು ಮುಖ್ಯ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ ಮಾಡಲು ಕೊರತೆಗಳೇನಾದರೂ ಇದ್ದಲ್ಲಿ ಗಮನಕ್ಕೆ ತರಬೇಕು. ಇಲಾಖೆಗಳ ಸಮಸ್ಯೆಗಳನ್ನು ಸಭೆಯಲ್ಲಿ ಮುಕ್ತವಾಗಿ ಚರ್ಚಿಸಬೇಕು. ಗಡಿ ಜಿಲ್ಲೆಯಾಗಿರುವುದರಿಂದ ನಡಾವಳಿಗಳನ್ನು ಅರಿಯವುದು ಮುಖ್ಯ ಎಂದರು.
ಇ-ಆಫೀಸ್ನಲ್ಲಿ ಕನ್ನಡ ಬಳಕೆಗೆ ಒತ್ತು
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಸರ್ಕಾರದ ಇಲಾಖೆಗಳಲ್ಲಿ ಅಂತರ್ಜಾಲವನ್ನು ಬಳಸಿಕೊಂಡು ಇ&-ಆಫೀಸ್ ತಂತ್ರಾಂಶ ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ತಂತ್ರಾಂಶದಲ್ಲಿ ಕನ್ನಡ ಭಾಷೆ ಬಳಕೆ ಹೆಚ್ಚು ಒತ್ತು ನೀಡಲಾಗಿದೆ. ತಂತ್ರಾಂಶವನ್ನು ಕನ್ನಡದಲ್ಲಿ ಬಳಕೆ ಮಾಡಲು ಅಧಿಕಾರಿಗಳಿಗೆ ತರಬೇತಿ ಅಗತ್ಯ. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಭವನವನ್ನು ನಿರ್ಮಿಸಲು, ಸರ್ಕಾರದ ಸ್ಥಳವನ್ನು ಗುರುತಿಸಿ ಕೊಡಲಾಗುವುದು. ಭವನವನ್ನು ನಿಮಾರ್ಣ ಮಾಡಲು ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡಿಸಬೇಕು ಎಂದು ಅಧ್ಯಕ್ಷರಿಗೆ ಕೋರಿದರು.
ಬ್ಯಾಂಕ್ಗಳಲ್ಲಿ ಸಮಸ್ಯೆ
ಬ್ಯಾಂಕ್ಗಳಿಗೆ ನೂತನವಾಗಿ ಬರುವ ಉದ್ಯೋಗಿಗಳಿಗೆ ಕನ್ನಡ ಭಾಷೆ ಕಲಿಸಲು ಲೀಡ್ ಬ್ಯಾಂಕ್ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು. ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಸುವ ಮರಣೋತ್ತರ ಪ್ರಮಾಣ ಪತ್ರವನ್ನು ಕನ್ನಡದಲ್ಲಿಯೇ ನೀಡಬೇಕು. ಸಾಧ್ಯವಾಗದಿದ್ದಲ್ಲಿ, ಮರಣಕ್ಕೆ ಕಾರಣ ಏನು? ಎಂಬುದನ್ನು ಕನ್ನಡದಲ್ಲಿ ದಾಖಲಿಸಲು ಪ್ರಯತ್ನಿಸಬೇಕು. ಅಲ್ಪ ಸಂಖ್ಯಾತರ ಉರ್ದು ಶಾಲೆಗಳಲ್ಲಿ ಹಾಗೂ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಕನ್ನಡ ಭಾಷೆೆಯನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ತಾಕೀತು ಮಾಡಿದರು.