ಜಿಲ್ಲೆ

ಗಡಿ ಭಾಗದಲ್ಲಿ ಕನ್ನಡ ಭಾಷೆ ಜೀವಂತ

Mysuru - Desk - Naveen Kumar H P

ಹನೂರು : ಕೇಂದ್ರ ಭಾಗಗಳಿಗಿಂತ ಗಡಿ ಭಾಗದಲ್ಲಿ ಕನ್ನಡ ಭಾಷೆ ಜೀವಂತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮಲ್ಲೇಶ್ ಮಾಲಿಂಕಟ್ಟೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕಸಾಪದಿಂದ ತಾಲೂಕಿನ ಅರ್ಧನಾರಿಪುರದ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ಕನ್ನಡ ಭಾಷೆಗೆ ತನ್ನದೆಯಾದ ಐಹಿಹಾಸಿಕ ಹಿನ್ನೆಲೆ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅನ್ಯ ಭಾಷೆಯ ವ್ಯಾಮೋಹದಿಂದ ಭಾಷೆಯ ಬಳಕೆ ಕ್ಷೀಣಿಸುತ್ತಿದೆ. ಆದ್ದರಿಂದ ನುಡಿಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಬೇಕು. ಇದರಿಂದ ಭಾಷೆಯಲ್ಲಿ ಪ್ರೌಢಿಮೆ ಸಾಧಿಸಬಹುದು ಎಂದರು.

ನಾವು ಎಷ್ಟೇ ಊರು ಸುತ್ತಿದರೂ ನಮ್ಮ ಊರನ್ನು ಹೇಗೆ ಮರೆಯಲು ಸಾಧ್ಯವಿಲ್ಲವೋ ಹಾಗೆಯೇ ಎಷ್ಟೇ ಭಾಷೆಯನ್ನು ಕಲಿತರೂ ತಾಯಿನುಡಿಯನ್ನು ಮರೆಯಲು ಸಾಧ್ಯವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗುತ್ತಿರುವುದು ನಿಜಕ್ಕೂ ವಿಪರ್ಯಾಸ.

ಇನ್ನು ನಗರ ಪ್ರದೇಶಗಳಿಗಿಂತ ಗಡಿ ಭಾಗಗಳಲ್ಲಿ ಕನ್ನಡ ಪ್ರೇಮ ಜನರ ಮನದಲ್ಲಿದೆ. ತಮಿಳುನಾಡು- ಕರ್ನಾಟಕದ ಗಡಿ ಅರ್ಧನಾರಿಪುರದಲ್ಲಿ ಕನ್ನಡ ಭಾಷೆ ಸಮೃದ್ಧವಾಗಿದೆ. ಇಲ್ಲಿನ ಜನರು ಪ್ರಬುದ್ಧರಾಗಿ ಕನ್ನಡ ಮಾತನಾಡುತ್ತಾರೆ. ಪ್ರೀತಿ, ಅಭಿಮಾನ ಹೊಂದಿದ್ದಾರೆ. ಹಾಗಾಗಿ ಇಲ್ಲಿನ ಜನರಲ್ಲಿ ಕನ್ನಡತನವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಶ್ರೀ ನಿವಾಸ್‌ನಾಯ್ಡು, ಕನ್ನಡ ಭಾಷೆ ಬೆಳೆದು ಬಂದ ದಾರಿಯ ಬಗ್ಗೆ ತಿಳಿಸಿಕೊಟ್ಟರು. ಭಾಷೆ ಸಂಬಂಧ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು. ಹುತ್ತೂರು ಶಾಲೆಯ ಮುಖ್ಯ ಶಿಕ್ಷಕ ಮಾದೇಶ್, ಕನ್ನಡ ಗೀತೆ ಹಾಡಿ ಮಕ್ಕಳನ್ನು ರಂಜಿಸಿದರು. ಮುಖ್ಯ ಶಿಕ್ಷಕ ಸಿದ್ದರಾಜು, ಪರಿಷತ್ ಸದಸ್ಯ ಸಿದ್ದಲಿಂಗಸ್ವಾಮಿ, ಶಿಕ್ಷಕರಾದ ಚಂದ್ರುಶೇಖರ್, ರಾಜೇಂದ್ರ ಇತರರು ಇದ್ದರು.