ಬೆಂಗಳೂರು: ಕರ್ನಾಟಕ ಮತ್ತು ಭಾರತ ಒಂದೇ ನಾಣ್ಯದ ಎರಡು ಮುಖಗಳು. ವಿಶ್ವಗುರುವಿನಂತಿರುವ ಈ ದೇಶ ಯಾಕೆ ಮುಖ್ಯವಾಗುತ್ತದೆ ಎಂಬುದನ್ನು ಕನ್ನಡದ ಕವಿಗಳು ತಮ್ಮ ಕವಿತೆಗಳಲ್ಲಿ ನಿರೂಪಿಸಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಬಿ.ವಿ. ವಸಂತ ಕುಮಾರ್ ಹೇಳಿದ್ದಾರೆ.
ನಗರದ ರಾಷ್ಟ್ರೊತ್ಥಾನ ಪರಿಷತ್ನ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯುತ್ತಿರುವ 'ಕನ್ನಡ ಪುಸ್ತಕ ಹಬ್ಬ' ಕಾರ್ಯಕ್ರಮದಲ್ಲಿ 'ಕನ್ನಡ ಕವಿಗಳು ಕಂಡ ಭಾರತ' ಕುರಿತು ಉಪನ್ಯಾಸ ನೀಡಿದರು.
ಈ ದೇಶವನ್ನು ತಾಯಿಯಾಗಿ ಚಿತ್ರಿಸಿದ ಕವಿತೆಗಳನ್ನು ಎಲ್ಲ ಕಾಲಟ್ಟದಲ್ಲಿ ಕಾಣಬಹುದಾಗಿದೆ. ಇಲ್ಲಿ ಪ್ರಾಕೃತಿಕ ಸಂಪತ್ತನ್ನು ಸಮೃದ್ಧವಾಗಿ ಕಟ್ಟಿಕೊಡಲಾಗಿದೆ. ನವ್ಯ ಹಾಗೂ ನವೋದಯ ಕಾಲದ ಕವಿತೆಗಳಲ್ಲಿ ಅಧ್ಯಾತ್ಮದ ಔನ್ನತ್ಯದಲ್ಲಿ ಭಾರತ ಮಾತೆಯನ್ನು ಚಿತ್ರಿಸಲಾಗಿದೆ. 1950ರ ನಂತರದ ಕವಿತೆಗಳಲ್ಲಿ ದೇಶದ ರಾಜಕೀಯ ವ್ಯವಸ್ಥೆಯನ್ನು ಹೊಗಳುವ ಮತ್ತು ವಿಡಂಬನೆ ಮಾಡುವ ಕವಿತೆಗಳು ಕಂಡು ಬಂದವು ಎಂದು ವಿವರಿಸಿದರು.
ದೇಶದ ನಿರ್ಮಾಣ ಹೇಗೆ ಆಗಬೇಕು ಎಂಬುದನ್ನು ಕವಿತೆಗಳು ಚಿತ್ರಿಸಿವೆ. ಸಿದ್ಧಲಿಂಗಯ್ಯನವರ 'ಆಸೆ' ಕವಿತೆಯಲ್ಲಿ ಭಾರತದ ಬಗ್ಗೆ ಎಲ್ಲವೂ ಇದೆ. ಆ ಕವಿತೆ ಪ್ರಕಟವಾಗಿದ್ದಾಗ ಅವರನ್ನು ಎಲ್ಲರೂ ಟೀಕಿಸಿದ್ದರು ಎಂದು ತಿಳಿಸಿದರು.
ಜನಸಾಮಾನ್ಯರು ಇಂದು ತಮ್ಮ ತಮ್ಮ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಹೀಗಾಗಿ ಕಳೆದ 10 ವರ್ಷಗಳಿಂದ ಭಾರತದಲ್ಲಿ ದೊಡ್ಡ ಮಟ್ಟದ ಸೈದ್ಧಾಂತಿಕ ಬದಲಾವಣೆಯಾಗಿದೆ. ಕೋಮುವಾದ ಎಂದು ಎಷ್ಟೇ ಅಪಪ್ರಚಾರ ನಡೆಸಿದರೂ, ಹಿಂದುತ್ವವನ್ನು ಜಗತ್ತು ಬಹುತ್ವ ಎಂದು ಒಪ್ಪಿಕೊಂಡಿದೆ. ಬಹುತ್ವ ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು ಎನ್ನುವುದನ್ನು ವಿಚಾರವಾದಿ ಸಾಹಿತಿಗಳೇ ಹೇಳುವ ಮಟ್ಟಕ್ಕೆ ಭಾರತ ಇಂದು ತಲುಪಿದೆ. ಈ ಬದಲಾವಣೆಯನ್ನು ತೆರೆದ ಮನಸ್ಸಿನಿಂದ ನೋಡುವ ಬರಹಗಾರರು ಬೇಕು ಎಂದು ವಸಂತ ಕುಮಾರ್ ಹೇಳಿದರು.
ನಾಡಿನ ಸಂಸತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ರಾಷ್ಟ್ರೊತ್ಥಾನ ಪರಿಷತ್ತು ಮಾಡುತ್ತಿದೆ. ಆದರೆ, ಓದಿನಿಂದ ವಿಮುಖರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಳವಳಕಾರಿ. ಪುಸ್ತಕೋದ್ಯಮ ಸೊರಗುತ್ತಿರುವ ಹೊತ್ತಿನಲ್ಲಿ ಇಂದಿನ ಜನಾಂಗಕ್ಕೆ ಓದಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಪುಸ್ತಕ ಸಂಸತಿ ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ನಮ್ಮ ಸಾಂಸತಿಕ ಶ್ರೀಮಂತಿಕೆ ಅರ್ಥವಾಗಲಿದೆ ಎಂದು ವಿಜಯವಾಣಿ ಪತ್ರಿಕೆ ಸಂಪಾದಕ ಕೆ.ಎನ್. ಚನ್ನೇಗೌಡ ಅಭಿಪ್ರಾಯಪಟ್ಟರು.