ಜಿಲ್ಲೆ

ಕುಶಾಲನಗರದಲ್ಲಿ ಕನ್ನಡ ಜ್ಯೋತಿ ರಥ ಯಾತ್ರೆಗೆ ಸ್ವಾಗತ

ಸುನಿಲ್ ಪೊನ್ನೇಟಿ

ಕುಶಾಲನಗರ:

ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆಯನ್ನು ವಾಣಿಜ್ಯ ನಗರಿ ಕುಶಾಲನಗರದ ಬೈಚನಹಳ್ಳಿ ಮಾರಿಯಮ್ಮ ದೇವಾಲಯದ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ, ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್ ನಾಗೇಶ್ ಹಾಗೂ ಪ್ರಮುಖರು ಭುವನೇಶ್ವರಿ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ರಥವನ್ನು ಬರಮಾಡಿಕೊಂಡರು.

ಕುಶಾಲನಗರದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಕನ್ನಡ ಪರ ಸಂಘಟನೆಗಳು, ಸೇರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭ ಹಾಜರಿದ್ದು, ಕನ್ನಡ ಜ್ಯೋತಿ ರಥದ ಜತೆ ಕನ್ನಡ ಪರ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸೇರಿದರು.

ಶಾಸಕ ಡಾ. ಮಂತರ್ ಗೌಡ ಈ ಸಂದರ್ಭ ಧ್ವಜಾರೋಹಣ ಮಾಡಿದರು. ನಂತರ ಮಾತನಾಡಿ, ಈ ಕರುನಾಡಿನಲ್ಲಿ ಹುಟ್ಟಿರುವ ನಾವೇ ಪುಣ್ಣವಂತರು. ಯಾವುದೇ ದೇಶ, ವಿದೇಶಕ್ಕೆ ಹೋದರೂ ನಮ್ಮ ಮಣ್ಣಿನ ಕಂಪು, ಭಾಷೆಯ ಸೊಗಡು, ಕರ್ನಾಟಕಕ್ಕೆ ಬರುವಾಗ ಸಿಗುವ ಆನಂದ ಎಲ್ಲಿಯೂ ಸಿಗುವುದಿಲ್ಲ. ಆಂಗ್ಲ ಶಾಲೆಯಲ್ಲಿ ವ್ಯಾಸಂಗ ಮಾಡಿದರೂ ಮನೆಯಲ್ಲಿ ನಮ್ಮ ಹಿರಿಯರು ಮಾತನಾಡುತ್ತಿದ್ದ ಕನ್ನಡ ಹಳ್ಳಿಯ ಸೊಗಡು ಇನ್ನೂ ಕೂಡ ನನ್ನ ಕಣ ಕಣದಲ್ಲಿ ಇದೆ. ಈಗಾಗಲೇ ಮಡಿಕೇರಿಯಲ್ಲಿ ಸಾಹಿತ್ಯ ಪರಿಷತ್ತು ಭವನವನ್ನು ಕಟ್ಟಲು ಸರ್ಕಾರದ ಮಟ್ಟದಲ್ಲಿ ಎಲ್ಲಾ ರೀತಿಯಲ್ಲಿ ಯೋಜನೆ ಸಿದ್ಧವಾಗಿದೆ. ಕುಶಾಲನಗರದ ಕನ್ನಡ ಭವನಕ್ಕೆ 1 ಕೋಟಿ ರೂ. ಅನುದಾನ ಬಿಡುಗಡೆ ಆಗಿದ್ದು, ಅತಿ ಶೀಘ್ರದಲ್ಲಿ ಕನ್ನಡ ಭವನ ಲೋಕಾರ್ಪಣೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಎಲ್ಲಾ ಕನ್ನಡ ಕಾರ್ಯಕ್ರಮಗಳು ಮತ್ತು ಊರಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಕನ್ನಡ ಭವನದಲ್ಲಿ ನಡೆಯಲಿದೆ ಎಂದರು.

ಗ್ಯಾರAಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ.ಸಾ.ಪ. ಜಿಲ್ಲಾಧ್ಯಕ್ಷ ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ನಾಗೇಶ್, ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮÃಚಂದ್ರು ಮಾತನಾಡಿದರು. ತಹಸೀಲ್ದಾರ್ ಕಿರಣ್ ಗೌರಯ್ಯ. ಡಿವೈಎಸ್‌ಪಿ ಆರ್.ಸಿ.ಗಂಗಾಧರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಕಲಾವಿದ ಜರಗನಹಳ್ಳಿ ಕಾಂತರಾಜ್, ನಿವೃತ್ತ ಶಿಕ್ಷಕ ಉ.ರಾ. ನಾಗೇಶ್ ಮತ್ತಿತರರು ಇದ್ದರು. ನಂತರ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆಯನ್ನು ಕುಶಾಲನಗರದಿಂದ ಬೀಳ್ಕೊಡಲಾಯಿತು.

ಕುಶಾಲನಗರದಿಂದ ಹೊರಟು ಕೂಡುಮಂಗಳೂರಿಗೆ ಆಗಮಿಸಿದ ರಥಯಾತ್ರೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಕೂಡಿಗೆ ಸರ್ಕಲ್ ಸಮೀಪದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಕೂಡುಮಂಗಳೂರು ಗ್ರಾಮ ಪಂಚಾಯತಿ ವತಿಯಿಂದ ಕನ್ನಡ ರಥಕ್ಕೆ ಹೂವಿನ ಹಾರ ಹಾಕುವುದರ ಮೂಲಕ ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಸ್ವಾಗತಿಸಿದರು. ನಂತರ ಕೂಡಿಗೆ ಸರ್ಕಲ್ ನಲ್ಲಿ ಗ್ರಾಮದ ಪಂಚಾಯತಿ ವತಿಯಿಂದ ಸದಸ್ಯ ಅರುಣ್ ರಾವ್ ರಥಕ್ಕೆ ಪುಷ್ಪಾರ್ಷಚನೆ ಮಾಡಿದರು. ಗ್ರಾಮದ ವಿವಿಧ ಮಹಿಳಾ ಸಂಘಟನೆಗಳ ಮಹಿಳೆಯರು ಕುಂಭಮೇಳದ ಮುಖಾಂತರ ರಥ ಬರಮಾಡಿಕೊಂಡರು. ರಥ ಯಾತ್ರೆಯ ಬಗ್ಗೆ ಕೂಡ್ಲೂರು ಪ್ರೌಢಶಾಲಾ ಮುಖ್ಯಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾಹಿತಿ ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್, ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಕೂಡಿಗೆ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಮಾಜಿ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟ, ಪ್ರಾಂಶುಪಾಲ ಕೆ.ಬಸಪ್ಪ, ಕಾಲೇಜಿನ ಹಿರಿಯ ಉಪನ್ಯಾಸಕರಾದ ನಾಗಪ್ಪ, ರಮೇಶ್, ಹನುಮರಾಜ್, ಬಸವನಹಳ್ಳಿ ಗಿರಿಜನರ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ಅರುಣ್ ರಾವ್, ಪಿಡಿಒ ಸಂತೋಷ್, ಮಂಜಳಾ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.

ನಂತರ ಕೂಡಿಗೆ ವ್ಯಾಪ್ತಿಯ ಆಟೋ ಮಾಲೀಕರು, ಚಾಲಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ರಥವನ್ನು ಮೆರವಣಿಗೆ ಮೂಲಕ ಸೋಮವಾರಪೇಟೆ ಕಡೆಗೆ ಬೀಳ್ಕೊಟ್ಟರು.