ಹುಬ್ಬಳ್ಳಿ: ಭಾರತೀಯ ಎಲ್ಲ ಭಾಷೆಗಳಲ್ಲಿ ಕನ್ನಡವೇ ಸರ್ವಶ್ರೇಷ್ಠ ಮತ್ತು ಶ್ರೀಮಂತವಾಗಿದೆ. ಇಂಥ ಭಾಷೆಯ ಸ್ಮರಣೆಯ ಜತೆಗೆ ಸಂರಕ್ಷಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ದೂರದರ್ಶನದ ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕ ಡಾ.ಎನ್. ಸೋಮೇಶ್ವರ ಅವರು ಹೇಳಿದರು.
ಕಿಮ್್ಸ ಕನ್ನಡ ಸಂಘದಿಂದ ಇಲ್ಲಿನ ಕಿಮ್್ಸ ಸಭಾಂಗಣದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಎರಡನೇ ದಿನದ ಕನ್ನಡ ಹಬ್ಬ ನುಡಿ ಮೃದಂಗ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾರಿಸು ಕನ್ನಡ ಡಿಂಡಿಮವಾ ಎಂಬ ಶಬ್ದ ನಾವೆಲ್ಲ ಕೇಳಿದ್ದೇವೆ. ಆದರೆ, ಅದರ ಅರ್ಥ ಅರಿತಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಕನ್ನಡ ಭಾಷೆಯನ್ನು ಜಗದಾದ್ಯಂತ ಸಾರಬೇಕೆಂಬುದು ಇದರ ತಾತ್ಪರ್ಯ. ನಮ್ಮ ಭಾಷೆಯನ್ನು ಪ್ರೀತಿಸಿ, ಗೌರವಿಸಿದಾಗ ಮಾತ್ರ ಮತ್ತಷ್ಟು ಶ್ರೀಮಂತವಾಗಲು ಸಾಧ್ಯ ಎಂದರು.
ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಸಾವಿರಾರು ವರ್ಷದ ಸುದೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ತನ್ನದೇ ಆದ ನೆಲೆ ಇದೆ. ಕನ್ನಡ ಭಾಷೆ ಅತೀ ಮಧುರು, ಸರಳ ಹಾಗೂ ವಿಶಾಲವಾಗಿದೆ ಎಂದರು.
ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ವೇಳೆ 2023ರ ವಿವಿಧ ಕಾರ್ಯಕ್ರಮಗಳ ‘ಮಂಥನ’ ಎಂಬ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ.ಎನ್. ಸೋಮೇಶ್ವರ ಅವರು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಥಟ್ ಅಂತ ಹೇಳಿ ಸ್ಪರ್ಧೆಯನ್ನು ನಡೆಸಿಕೊಟ್ಟರು. ಗೆದ್ದವರಿಗೆ ಕನ್ನಡ ಕೃತಿಗಳನ್ನು ಬಹುಮಾನವಾಗಿ ನೀಡಿದರು.
ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ರಾಜಶೇಖರ ದ್ಯಾಬೇರಿ, ಡಾ.ಕೆ.ಎಫ್. ಕಮ್ಮಾರ, ಡಾ. ರುಕ್ಮಿಣಿ ಎಸ್., ಇತರರು ಇದ್ದರು.