ದಾವಣಗೆರೆ: ಸುದೀರ್ಘ ಇತಿಹಾಸ, ಸಾಹಿತ್ಯ ಸಂಪತ್ತು, ನೈಸರ್ಗಿಕ ಶ್ರೀಮಂತಿಕೆ ಇರುವ ಕನ್ನಡ ಭಾಷೆ ಎಲ್ಲರ ಬದುಕಿಗೆ ಉಸಿರಾಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಆಶಿಸಿದರು.
ದವನ -ನೂತನ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡಕ್ಕಿರುವ ಶ್ರೀಮಂತಿಕೆ ಯಾವುದೇ ಪ್ರಾದೇಶಿಕ ಭಾಷೆಗೂ ಇಲ್ಲ. ಕಾಣುವುದಿಲ್ಲ, ಆದರೆ ಮಾತೃಭಾಷೆ ಮಾತನಾಡಲು ಕನ್ನಡಿಗರೇ ಹಿಂದೇಟು ಹಾಕುತ್ತಿದ್ದಾರೆ. ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್ ಪರಶುರಾಮನಗೌಡ ಮಾತೃಭಾಷೆ ಜೀವಂತವಾಗಿ ಹೀಗೇ ಉಳಿಯಲು ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಲು ಮುಂದಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ದವನ-ನೂತನ ಪದವಿ ಕಾಲೇಜು ಉಪ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಎನ್, ಕನ್ನಡ ಉಪನ್ಯಾಸಕರಾದ ಕೊಟ್ರಪ್ಪ ಕೆ, ಲಲಿತಾ ಎಸ್ ಕೆ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ 'ಉಚ್ಚರಿಸು ಕನ್ನಡ' ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ಅಕ್ಷರಮಾಲೆ ಸುತ್ತು, ಗಾದೆ ಮಾತು ಸುತ್ತು, ಕನ್ನಡ ಸಂಖ್ಯೆಯ ಸುತ್ತು, ಕಾಗುಣಿತದ ಸುತ್ತು, ಕವಿಯ ಹೆಸರು ಪೂರ್ಣ ಮಾಡುವ ಸುತ್ತು ಹೀಗೆ 5 ಸುತ್ತಿನ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ಚೈತ್ರಾ ಪ್ರಥಮ, ಗೌರಿ ದ್ವಿತೀಯ, ಮಂಜುನಾಥ ತೃತೀಯ ಬಹುಮಾನ ಪಡೆದರು.