ಜಿಲ್ಲೆ

ರಾಷ್ಟ್ರೀಯ ಪಕ್ಷಗಳಿಂದ ಕನ್ನಡಕ್ಕೆ ಅವಮಾನ

ಚಿತ್ರದುರ್ಗ: ರಾಷ್ಟ್ರೀಯ ಪಕ್ಷಗಳು ಕನ್ನಡಿಗರನ್ನು ಕಡೆಗಣಿಸುತ್ತಿವೆ. ಪ್ರಾದೇಶಿಕ ಪಕ್ಷದಿಂದ ಮಾತ್ರ ನಾಡಿನ ಎಲ್ಲ ಸಮಸ್ಯೆಗೂ ಪರಿಹಾರ ದೊರೆಯಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ ತಿಳಿಸಿದರು.

ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ತಾಯಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ರಾಜ್ಯದ ಮತದಾರರು ಆಶೀರ್ವದಿಸಿ ಜೆಡಿಎಸ್‌ಗೆ ಅಧಿಕಾರ ನೀಡಿದಲ್ಲಿ ನಾಡು, ನುಡಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಮೊದಲು ಆದ್ಯತೆ ನೀಡುತ್ತೇವೆ. ಜತೆಗೆ ನಿತ್ಯವೂ ಕನ್ನಡ ಭಾಷೆಯ ಸ್ಮರಣೋತ್ಸವವಾಗಲಿದೆ ಎಂದು ಭರವಸೆ ನೀಡಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ನಾಡಿನಲ್ಲಿ ಹಿಂದಿ ಭಾಷೆ ಹೇರುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕರುನಾಡಲ್ಲಿ ಕನ್ನಡಿಗರೇ ಸಾರ್ವಭೌಮರು. ಹೀಗಾಗಿ ಹೆಚ್ಚಿನ ಮಾನ್ಯತೆ ಸಿಗಬೇಕಾದರೆ ಅದು ಜೆಡಿಎಸ್‌ನಿಂದ ಮಾತ್ರ ಸಾಧ್ಯ. ಅಲ್ಲದೆ, ಎಲ್ಲೆಡೆ ಸ್ವಾಭಿಮಾನಿ ವೇದಿಕೆ ಸ್ಥಾಪಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಈ ಹಿಂದೆ ಜೆಡಿಎಸ್ ಅಧಿಕಾರದಲ್ಲಿದ್ದಾಗ ಜನರಿಗಾಗಿ ಜಾರಿಗೊಳಿಸಿದಷ್ಟು ಯೋಜನೆಯನ್ನು ಬೇರೆ ಯಾವ ಪಕ್ಷವೂ ಕೊಟ್ಟಿಲ್ಲ. ಇದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಕೆಲಸ ಕಾರ್ಯಕರ್ತರದು. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ ಎಸ್.ಜೆ.ಹನುಮಂತರಾಯ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ತಿಪ್ಪೇಸ್ವಾಮಿ ಪಕ್ಷ ಸೇರ್ಪಡೆಯಾದರು.

ಮುಖಂಡರಾದ ವೀರಣ್ಣ, ಜೆ.ಬಿ.ಶೇಖರ್, ಡಿ.ಗೋಪಾಲಸ್ವಾಮಿ ನಾಯಕ, ಆರ್.ನಿಂಗಾನಾಯ್ಕ, ಸಣ್ಣತಿಮ್ಮಣ್ಣ, ಗುರುಸಿದ್ದಪ್ಪ, ಗೀತಾ, ಲಿಂಗಣ್ಣ, ನಜೀರ್, ಅಬ್ಬು, ರವಿಕುಮಾರ್, ಹನುಮಂತರಾಯಪ್ಪ, ಗಣೇಶ್, ಪರಮೇಶ್ವರಪ್ಪ, ನಗರಸಭೆ ಸದಸ್ಯರಾದ ನಸ್‌ರುಲ್ಲಾ, ದೀಪು, ಮಾಜಿ ಸದಸ್ಯ ಮಂಜುನಾಥ್ ಇತರರಿದ್ದರು.