ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಅಳವಡಿಸಿರುವ ನಾಮಫಲಕಗಳು ಹಾಗೂ ಸೂಚನಾ ಫಲಕಗಳಲ್ಲಿ ಕನ್ನಡ ಲಿಪಿಯಲ್ಲಿ ಆಂಗ್ಲ ಪದಗಳನ್ನು ಬರೆಯಲಾಗಿದೆ. ಈ ರೀತಿ ಕನ್ನಡವನ್ನು ಸಮಪರ್ಕವಾಗಿ ಬಳಸದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಗೆಳೆಯರ ಬಳಗ ಸರ್ಕಾರವನ್ನು ಆಗ್ರಹಿಸಿದೆ.
ಸರ್ಕಾರಿ ನಾಮಫಲಗಳನ್ನು ಕಡ್ಡಾಯವಾಗಿ ಕನ್ನಡಲ್ಲಿಯೇ ಪ್ರದರ್ಶಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಆದೇಶ ಹೊರಡಿಸಿರುವುದು ಸ್ವಾಗತಾರ್ಹ. ಆದರೆ ನಾಮಫಲಗಳಲ್ಲಿ ಕೇವಲ ಕನ್ನಡ ಲಿಪಿ ಮಾತ್ರ ಬಳಸಿದರೆ ಸಾಲದು, ಕನ್ನಡ ಭಾಷೆಗೂ ಅದ್ಯತೆ ನೀಡಬೇಕು. ಬಹಳಷ್ಟು ಸಂಚಾರ ಪೊಲೀಸ್ ಸೂಚನಾ ಲಕಗಳು ಆಂಗ್ಲ ಭಾಷೆಯಲ್ಲಿಯೇ ಇರುತ್ತವೆ. ಕನ್ನಡದಲ್ಲಿ ಇದ್ದರೂ, ಕಾಗುಣಿತ ದೋಷ ಹೊಂದಿರುತ್ತವೆ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ರಾಜ್ಯ ಸರ್ಕಾರದ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್, ಸಂಸ್ಥೆ ಎಂದು ಕನ್ನಡ ಲಿಪಿ ಬಳಸಿ ಆಂಗ್ಲ ಪದಗಳನ್ನು ಬರೆಯಲಾಗಿದೆ. ಬದಲಿಗೆ ಅದನ್ನು ಕನ್ನಡದಲ್ಲಿ ‘ ಕರ್ನಾಟಕ ರಾಜ್ಯ ಮಾರುಕಟ್ಟೆ ಚಟುವಟಿಕೆ ಸಂವಹನ ಮತ್ತು ಜಾಹೀರಾತು ನಿಯಮಿತ’ ಎಂದು ಬರೆಯಬೇಕಿತ್ತು ಎಂದು ತಿಳಿಸಿದ್ದಾರೆ.
ಇನ್ನು ಬನಶಂಕರಿ 1ನೇ ಹಂತವನ್ನು ‘ಬಿಎಸ್‌ಕೆ 1ನೇ ಹಂತ’ ಎಂದು, ಜಯನಗರ 9ನೇ ಮುಖ್ಯರಸ್ತೆಗೆ ‘ಜಯನಗರ 9ನೇ ಮೇನ್’ ಎಂದು ಬಳಸಲಾಗಿದೆ. ಅದೇ ರೀತಿ ವಾಸವಿ ಟೆಂಪಲ್ ರಸ್ತೆ, ಬುಲ್ ಟೆಂಪಲ್ ರಸ್ತೆ ಹೀಗೆ ವಿವಿಧ ರಸ್ತೆಗಳ ಹೆಸರನ್ನು ಆಂಗ್ಲ ಪದಗಳನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.