ಬೆಂಗಳೂರು: ಕನ್ನಡ ಹೋರಾಟಗಾರರ ನಿರಂತರ ಪ್ರಯತ್ನದಿಂದ ಡಾ. ಸರೋಜಿನಿ ಮಹಿಷಿ ವರದಿಯ ಅನುಷ್ಠಾನ ಮತ್ತು ಆಡಳಿತ ಭಾಷೆಯಾಗಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಹೊಣಗಾರಿಕೆಯಿಂದ ಸ್ಥಾಪನೆಯಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ನಿಜ ಉದ್ದೇಶ ಮರೆತಿದೆ ಎಂದು ಕನ್ನಡ ಗೆಳೆಯರ ಬಳಗ ಅಸಮಾಧಾನ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಉದ್ಯೋಗ ನೇಮಕಾತಿಯಲ್ಲಿ ಕನ್ನಡಿಗರಿಗೆ ವಂಚನೆಯಾಗುತ್ತಿದ್ದು, ಕರ್ನಾಟಕದ ಪಾಲಿನ ಹುದ್ದೆಗಳೇ ರದ್ದಾಗುತ್ತಿವೆ. ಸರ್ಕಾರಿ ಶಾಲೆಗಳು ಅಳಿವಿನಂಚಿನಲ್ಲಿವೆ, ಗಣಕೀಕರಣದಿಂದ ಆಡಳಿತದಲ್ಲಿ ಇಂಗ್ಲಿಷ್ ಬಳಕೆ ಹೆಚ್ಚಿದೆ. ಇಂತಹ ವಿಚಾರಗಳ ಬಗ್ಗೆ ಗಮನ ಹರಿಸದೆ, ಕೇವಲ ಕನ್ನಡೇತರರಿಗೆ ಕನ್ನಡ ಕಲಿಸುವು ಕಾರ್ಯದಲ್ಲಿ ನಿರತವಾಗಿದೆ. ಆ ಮೂಲಕ ತನ್ನ ಮೂಲಕ ಆಶಯಗಳಿಂದ ದೂರ ಸರಿಯುತ್ತಿದೆ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್ ದೂರಿದ್ದಾರೆ.
ಕನ್ನಡೇತತರು ಸ್ವತಃ ಕನ್ನಡ ಕಲಿಯುವ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿಂದಿನಿಂದಲೂ ಮಾಡುತ್ತಾ ಬಂದಿದೆ. ಹಾಗಿರುವಾಗ ಕನ್ನಡೇತರರಿಗೆ ಸ್ವತಃ ಕನ್ನಡ ಕಲಿಯುವ ವಾತಾವರಣ ನಿರ್ಮಿಸುವ ಬದಲು ಅವರಿಗೆ ಪ್ರಾಧಿಕಾರದಿಂದ ಕನ್ನಡ ಕಲಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಮೂಲಕ ಕೆಲಸಗಳಿಂದ ಹಿಂದೆ ಸರಿಯುತ್ತಿದೆ. ಈ ವಿಚಾರವಾಗಿ ಕನ್ನಡ ಸಂಘಟನೆಗಳು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದ್ದಾರೆ.