ಜಿಲ್ಲೆ

500 ಮೀಟರ್ ಕನ್ನಡ ಧ್ವಜ ಮೆರವಣಿಗೆ,  ಹುಬ್ಬಳ್ಳಿಯಲ್ಲಿ 25ರಂದು ಭಾಷಾ ಜಾಗೃತಿ

Dharwada - Basavaraj Idli

ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವದ 70ನೇ ವರ್ಷಾಚರಣೆ ಅಂಗವಾಗಿ ಇಲ್ಲಿಯ ಕರ್ನಾಟಕ ಸಂಗ್ರಾಮ ಸೇನೆಯ ವತಿಯಿಂದ ಅ. 25ರಂದು ಮಧ್ಯಾಹ್ನ 12ಕ್ಕೆ ನಗರದ ದುರ್ಗದಬೈಲ್ ನಿಂದ ಚನ್ನಮ್ಮ ವೃತ್ತದವರೆಗೆ ಬೃಹತ್ ಕನ್ನಡ ಧ್ವಜ ಪ್ರದರ್ಶನ ಹಾಗೂ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಸೇನೆ ಅಧ್ಯಕ್ಷ ಸಂಜೀವ ದುಮ್ಮಕನಾಳ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 500 ಮೀಟರ್ ಉದ್ದದ ಕನ್ನಡ ಧ್ವಜವನ್ನು 600 ಮಹಿಳೆಯರು, ಮಕ್ಕಳು ಇತರರು ಸೇರಿ ಸಾವಿರಾರು ಜನರು ಮೆರವಣಿಗೆ ಮಾಡುವರು. ಕರಡಿ ಮಜಲು ಸೇರಿ ವಿವಿಧ ಕಲಾ ತಂಡಗಳು, ಕನ್ನಡಕ್ಕಾಗಿ ದುಡಿದ ಮಹನೀಯರ ವೇಷಭೂಷಣಗಳನ್ನು ಹಾಕಿಕೊಂಡು ಮಕ್ಕಳು ಭಾಗಿಯಾಗುವರು. 60 ಆಟೋ ಚಾಲಕರು ಮೆರವಣಿಗೆಯಲ್ಲಿ ಭಾಗವಹಿಸುವರು ಎಂದರು.

ಅಂದು ಮಧ್ಯಾಹ್ನ ದುರ್ಗದಬೈಲ್ ನಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಧ್ವಜ ಮೆರವಣಿಗೆಗೆ ಚಾಲನೆ ನೀಡುವರು. ಮೇಯರ್ ಜ್ಯೋತಿ ಪಾಟೀಲ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳುವರು. ಸಾಧಕರಿಗೆ ಸನ್ಮಾನ ಮಾಡಲಾಗುವುದು. ಈ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ತಿಳಿವಳಿಕೆ ನೀಡಲಾಗುವುದು ಎಂದರು.

ಸೇನೆಯ ಪ್ರಮುಖರಾದ ಚನ್ನಮ್ಮ ಚಿಲಕವಾಡ, ಅಶ್ವಿನಿ ಮಾದರ, ಮಂಜುಳಾ ಹೊನ್ನಿಕೇರಿ, ರತ್ನಾ ಕಲಗೌಡ್ರ ಇದ್ದರು.