ಮಂಡ್ಯ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಭಿಯಾನವನ್ನು ಹಮ್ಮಿಕೊಳ್ಳುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಶಾಸಕ ಎಂ.ಶ್ರೀನಿವಾಸ್ ಕಚೇರಿ ಬಳಿ ಸಾರ್ವಜನಿಕರಿಗೆ ಕನ್ನಡ ಬಾವುಟ ವಿತರಣೆ ಮಾಡಲಾಯಿತು.
ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರೂ ಆದ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಸ್ಪರ್ಧಾಕಾಂಕ್ಷಿ ಎಚ್.ಎನ್.ಯೋಗೇಶ್ ಬಾವುಟ ವಿತರಿಸಿದರು. ಬಳಿಕ ಮಾತನಾಡಿ, ಜೆಡಿಎಸ್ ಈಗಾಗಲೇ ಹಲವು ಕನ್ನಡ ಪರ ಅಭಿಯಾನದ ಮೂಲಕ ಜನರನ್ನು ತಲುಪುತ್ತಿದೆ. ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರದಲ್ಲಿ ಧ್ವನಿ ಎತ್ತುತ್ತಿದೆ. ಇನ್ನು ಪಂಚರತ್ನ ಯೋಜನೆಗೆ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ, ಆರೋಗ್ಯದ ಪಂಚರತ್ನ ಯೋಜನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದರೊಂದಿಗೆ 2023ಕ್ಕೆ ಮತ್ತೊಮ್ಮೆ ಎಚ್‌ಡಿಕೆ ಅವರು ಮುಖ್ಯಮಂತ್ರಿ ಆಗಲು ಸಂಕಲ್ಪ ಮಾಡುತ್ತೇವೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿ ಹೊಂದಲಾಗಿದೆ. ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕೆಂಬ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪಂಚರತ್ನ ಸಂಪೂರ್ಣ ಪರಿಹಾರವಾಗಲಿದೆ. ಇನ್ನು ರಾಜ್ಯೋತ್ಸವದ ಅಭಿಯಾನದ ಹಿನ್ನೆಲೆಯಲ್ಲಿ ಮಂಡ್ಯ ನಗರ, ಕೆರಗೋಡು, ಬಸರಾಳು ಸೇರಿದಂತೆ 10 ಸಾವಿರ ಬಾವುಟಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಆರ್‌ಎಪಿಸಿಎಂಎಸ್ ಉಪಾಧ್ಯಕ್ಷ ಮಹೇಶ್, ಜೆಡಿಎಸ್ ನಗರಾಧ್ಯಕ್ಷ ಎಸ್.ಪಿ.ಗೌರೀಶ್, ನಗರಸಭೆ ಸದಸ್ಯ ಭಾರತೀಶ್, ವಸೀಂ, ದಸ್ತಗಿರ್, ಎಂ.ಆರ್.ಮಂಜು, ಮಧುನಂದನ್, ಪುಟ್ಟಸ್ವಾಮಿ, ನಾಗೇಶ್, ಎಚ್.ಎನ್.ರಮೇಶ್, ಹಳೇಬೂದನೂರು ಮಧು, ಎಲ್.ರಮೇಶ್, ಪುಟ್ಟರಾಜು, ಗೌಡಗೆರೆ ಮಹೇಂದ್ರ, ಸಾತನೂರು ಶಿವಕುಮಾರ್, ಅನಿಲ್, ನವೀನ್ ಇತರರಿದ್ದರು.